ಉಡುಪಿ : ಮೂರೂವರೆ ತಿಂಗಳಲ್ಲಿ ಕನಿಷ್ಠ ಕೋವಿಡ್ ಪಾಸಿಟಿವ್, ಇಬ್ಬರು ಬಲಿ

ಉಡುಪಿ, ಜು.4: ಜಿಲ್ಲೆಯಲ್ಲಿ ರವಿವಾರ ಕಳೆದ ಮೂರೂವರೆ ತಿಂಗಳಲ್ಲಿ ಕನಿಷ್ಠ ಕೊರೋನ ಸೋಂಕಿನ ಪಾಸಿಟಿವ್ ವರದಿಯಾಗಿದ್ದು, ಕೇವಲ 28 ಮಂದಿಯಲ್ಲಿ ಅದು ದೃಢಪಟ್ಟಿದೆ. ದಿನದಲ್ಲಿ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದು, 130 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 821ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಉಡುಪಿಯ 69 ವರ್ಷದ ಹಾಗೂ ಕುಂದಾಪುರ ತಾಲೂಕಿನ 64 ವರ್ಷ ಪ್ರಾಯದ ಹಿರಿಯ ನಾಗರಿಕರು ಸೋಂಕಿಗೆ ಬಲಿಯಾಗಿದ್ದಾರೆ. ತೀವ್ರ ರೀತಿಯ ಕೊರೋನ ಸೋಂಕಿಗೆ ತುತ್ತಾಗಿದ್ದ ಇಬ್ಬರೂ ಉಸಿರಾಟದ ತೊಂದರೆ, ನ್ಯುಮೋನಿಯಾದಿಂದ ನರಳುತಿದ್ದು, ಇತರ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಜೂ.30ಕ್ಕೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಸಂಖ್ಯೆ 397ಕ್ಕೇರಿದೆ.
ಕಳೆದ ಮಾ.19ರ ಬಳಿಕ ಜಿಲ್ಲೆಯಲ್ಲಿ ಅತ್ಯಂತ ಕನಿಷ್ಠ 28 ಮಂದಿಯಲ್ಲಿ ಇಂದು ಪಾಸಿಟಿವ್ ದೃಢಪಟ್ಟಿದ್ದು, ಇವರಲ್ಲಿ 13 ಮಂದಿ ಪುರುಷರು ಹಾಗೂ 15 ಮಂದಿ ಮಹಿಳೆಯರು ಸೇರಿದ್ದಾರೆ. ಉಡುಪಿ ತಾಲೂಕಿನ 10, ಕುಂದಾಪುರ ತಾಲೂಕಿನ 10 ಹಾಗೂ ಕಾರ್ಕಳ ತಾಲೂಕಿನ 8 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಇವರಲ್ಲಿ ನಾಲ್ವರು ಕೋವಿಡ್ ಆಸ್ಪತ್ರೆ ಹಾಗೂ 24 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಶನಿವಾರ 130 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 65,587ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 2769 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆ ಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 66,805 ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,93,237 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ರವಿವಾರ ಯಾರಲ್ಲೂ ಹೊಸದಾಗಿ ಬ್ಲಾಕ್ ಫಂಗಸ್ ಸೋಂಕು ಕಂಡು ಬಂದಿಲ್ಲ. ಹೀಗಾಗಿ ಜಿಲ್ಲೆಯಲ್ಲೀಗ ಒಟ್ಟು 8 ಮಂದಿ ಕಪ್ಪು ಶಿಲೀಂದ್ರ ಸೋಂಕು ಹೊಂದಿದ್ದು, ಎಲ್ಲರೂ ಮಣಿಪಾಲದ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
787 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ರವಿವಾರ ಒಟ್ಟು 787 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಇವರಲ್ಲಿ 574 ಮಂದಿ ಮೊದಲ ಡೋಸ್ ಹಾಗೂ 213 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ತಿಳಿಸಿದ್ದಾರೆ. ಇಂದು 18ರಿಂದ 44 ವರ್ಷದೊಳಗಿನ 486 ಮಂದಿ ಮೊದಲ ಡೋಸ್ ಪಡೆದರೆ, 45 ವರ್ಷ ಮೆೀಲಿನ 301 ಮಂದಿ ಲಸಿಕೆ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 4,29,095 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದರೆ, 1,29,075 ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.







