ಕೋವಿಡ್ ಕುರಿತು ಎಚ್ಚರ ತಪ್ಪಿದರೆ 3ನೇ ಲಾಕ್‍ಡೌನ್ ಖಚಿತ: ಸಚಿವ ಆರ್.ಅಶೋಕ್

ಬೆಂಗಳೂರು, ಜು.4: ಸಾರ್ವಜನಿಕರು ಕಡ್ಡಾಯವಾಗಿ ಕೊವಿಡ್-19 ಲಸಿಕೆ ಹಾಕಿಸಿಕೊಳ್ಳಬೇಕು. ಮಾಸ್ಕ್, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಎಚ್ಚರ ತಪ್ಪಿದರೆ ಮೂರನೇಯ ಬಾರಿಗೆ ಲಾಕ್‍ಡೌನ್ ಆಗುವುದು ಖಚಿತ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಪದ್ಮನಾಭನಗರ ವಿಧಾನಸಭಾ ಆಟದ ಮೈದಾನದಲ್ಲಿ ಕೊರೋನ ವೈರಸ್ ಸಾಂಕ್ರಮಿಕ ರೋಗದ ಕಾರಣದಿಂದ ಉದ್ಯೋಗವಿಲ್ಲದೆ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಒಂದು ಸಾವಿರ ಆಟೋ ಚಾಲಕರು ಮತ್ತು ಕೂಲಿ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ಪಾಸಿಟಿವ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಮತ್ತು ಹೋಂ ಐಸೋಲೇಶನ್ ಇರುವವರಿಗೆ ಮನೆಯಲ್ಲಿರುವ ಸೋಂಕಿತರಿಗೆ ಆಹಾರ ಕಿಟ್, ಔಷದಿ, ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುವರವರಿಗೆ ಆಕ್ಸಿಜನ್ ಸಾಂದ್ರಕಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಕುರಿತು ಸಾರ್ವಜನಿಕರು ಎಚ್ಚರಿಕೆವಹಿಸಿಬೇಕು. ಎಚ್ಚರ ತಪ್ಪಿದರೆ ನಿಮ್ಮ ಜೊತೆಯಲ್ಲಿ ನಿಮ್ಮ ಕುಟುಂಬವು ಕೋವಿಡ್‍ಗೆ ತುತ್ತಾಗುವ ಸಾಧ್ಯತೆ ಇದೆ. ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕಾರ್ಡ್‍ದಾರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.
ಆಟೋ ಚಾಲಕರು ಕೊರೋನ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಣೆ ಮಾಡಬೇಕು. ಆಟೋದಲ್ಲಿ ಪ್ರಯಾಣಿಕರ ಬಗ್ಗೆ ನಿಗಾವಹಿಸಿ ಕೋವಿಡ್ ನಿಯಾವಳಿ ಪಾಲಿಸುವಂತೆ ಜಾಗೃತಿ ಮೂಢಿಸಬೇಕು. ಹೀಗೆ ಪರಸ್ಪರರ ಸಹಕಾರದಿಂದ ಕೊರೋನ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಬಹುದೆಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಸಾವಿರಾರು ಸೋಂಕಿತರ ಅಸ್ಥಿಗಳನ್ನು ಕುಟುಂಬಸ್ಥರು ತೆಗೆದುಕೊಳ್ಳದೇ ಹಾಗೇ ಬಿಟ್ಟಿದ್ದರು. ಸಂಪ್ರದಾಯ ಪ್ರಕಾರ ಗೌರವಯುತ ಅಂತ್ಯಸಂಸ್ಕಾರ ಮಾಡಬೇಕು ಎಂಬ ದೃಢ ನಿರ್ಧಾರ ಕೈಗೊಂಡು ಕಾವೇರಿ ನದಿಯಲ್ಲಿ ಸಾವಿರಾರು ಅಸ್ಥಿಗಳನ್ನು ವಿಸರ್ಜನೆ ಮಾಡಲಾಯಿತು. ಇದನ್ನು ನಾನು ಪುಣ್ಯದ ಕೆಲಸವೆಂದೇ ಭಾವಿಸಿದ್ದೇನೆಂದು ಅವರು ಹೇಳಿದ್ದಾರೆ.
ಮಾಜಿ ಉಪ ಮಹಾಪೌರ ಶ್ರೀನಿವಾಸ್ ಮಾತನಾಡಿ, ತನ್ನ ವಾರ್ಡ್‍ನಲ್ಲಿ ಈವರೆಗೂ ಸುಮಾರು 5ಸಾವಿರಕ್ಕೂ ಹೆಚ್ಚು ಜನರಿಗೆ ದಿನಸಿ ಕಿಟ್ ವಿತರಣೆ ಮಾಡಲಾಗಿದ್ದು, ಮನೆ ಮನೆಗೆ ರೇಷನ್ ಕಿಟ್ ನೀಡುವ ಮುಖೇನವಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ ಎಂದು ತಿಳಿಸಿದ್ದಾರೆ.
.jpg)





