ನಮ್ಮದೇ ಸರ್ಕಾರವಿದ್ದರೂ ಯಾವುದೇ ಉಪಯೋಗವಿಲ್ಲ: ಸಚಿವ ಸಿ.ಪಿ. ಯೋಗೇಶ್ವರ್

ಮೈಸೂರು,ಜು.4: ಮುಖ್ಯಮಂತ್ರಿ ಹುದ್ದೆ ಅನ್ನೋದು ಅಂಬಾರಿ ಹೊರುವ ಆನೆ ಇದ್ದಂತೆ, ಅಪ್ಪ ಅಂಬಾರಿ ಹೊತ್ತ ಅಂತ ಮರಿ ಆನೆಗೆ ಅಂಬಾರಿ ಹೊರಿಸೋಕೆ ಆಗಲ್ಲ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಸಚಿವ ಸಿ.ಪಿ.ಯೋಗೇಶ್ವರ ಹರಿಹಾಯ್ದರು.
ನಗರದ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ರವಿವಾರ ಆಗಮಿಸಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ನಮ್ಮದೇ ಸರ್ಕಾರವಿದ್ದರೂ ಯಾವುದೇ ಉಪಯೋಗವಿಲ್ಲ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿಲ್ಲ. ಜಿ.ಪಂ.ತಾಪಂ. ಚುನಾವಣೆಗೆ ಮೀಸಲಾತಿ ಪ್ರಕಟವಾಗಿದೆ. ಆದರೆ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅನುಕೂಲವಾಗುವಂತೆ ಮೀಸಲಾತಿ ನೀಡಲಾಗಿದೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ಮುಖ್ಯಮಂತ್ರಿ ಹುದ್ದೆ ಅನ್ನೋದು ಅಂಬಾರಿ ಹೊರುವ ಆನೆ ಇದ್ದಂತೆ. ಸಂವೇದನಾಶೀಲ ಆಲೋಚನೆ, ಸಾಮರ್ಥಯ ಇರಬೇಕು, ಸಿಎಂ ಹುದ್ದೆ ವೈಭವ, ಪ್ರೆಸ್ಟೀಜ್‍ಗೆ ಅಲ್ಲ, ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವಂತಿರಬೇಕು, ಬದಲಾವಣೆ ಜಗದ ನಿಯಮ, ಅರ್ಜುನ, ಅಭಿಮನ್ಯು ಕೆಲ ವರ್ಷ ಅಂಬಾರಿ ಹೊತ್ತ. ಅಪ್ಪ ಅಂಬಾರಿ ಹೊತ್ತ ಅಂತ ಮರಿ ಆನೆಗೆ ಅಂಬಾರಿ ಹೊರಿಸೋಕೆ ಆಗಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ನಾವು ಬಹಳಷ್ಟು ಕಷ್ಟಪಟ್ಟಿದ್ದೇವೆ. ಆದರೆ, ನಮ್ಮ ಶ್ರಮ ಯಾರಿಗೂ ಕಾಣಿಸುತ್ತಿಲ್ಲ, ಜನರು ದೇಗುಲಕ್ಕೆ ಹೋದರೆ ರಾಜಗೋಪುರಕ್ಕೆ ಕೈಮುಗಿಯುತ್ತಾರೆ. ರಾಜಗೋಪುರದ ಕೆಳಗಿನ ಚಪ್ಪಡಿಗಳು ಜನರಿಗೆ ಕಾಣುವುದಿಲ್ಲ. ಚಪ್ಪಡಿ ಕಲ್ಲಿನ ಮೇಲೆ ಚಪ್ಪಲಿಬಿಟ್ಟು ರಾಜಗೋಪುರ ನೋಡುತ್ತಾರೆ. ನಮ್ಮ ಸ್ಥಿತಿ ಚಪ್ಪಡಿ ಕಲ್ಲಿನಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಪದೇ ಪದೇ 25 ಪರ್ಸೆಂಟ್ ಸರ್ಕಾರ ಅಂತಾರೆ. ವೈಯಕ್ತಿವಾಗಿ ವಿಚಾರ ಇದ್ದರೆ ರುಜುವಾತು ಮಾಡಬೇಕು. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನೆಲ್ಲ ಒಟ್ಟಿಗೆ ಸೇರಿಸಿ ಹೇಳಬಾರದು. ವಿಜಯೇಂದ್ರನಿಗೆ ಸರ್ಕಾರದಲ್ಲಿ ಯಾವುದೇ ಅಧಿಕೃತ ಹುದ್ದೆ ಇಲ್ಲ. ನಮಗೆ ಆಗುತ್ತಿರುವ ಚಿತ್ರ ಹಿಂಸೆ ಯಾರಿಗೆ ಹೇಳೋದು. ನಮ್ಮ ಸರ್ಕಾರ ಬಂದರೂ ನಮ್ಮ ಸರ್ಕಾರ ಇದೆ ಎಂಬ ಭಾವನೆ ನಮಗಿಲ್ಲ ಎಂದು ಹೇಳಿದರು.
“ಶಾಸಕ ರಮೇಶ್ ಜಾರಕಿಹೊಳಿ ಷಡ್ಯಂತರಕ್ಕೆ ಬಲಿಯಾಗಿರುವುದು ನಿಜ”
ಶಾಸಕ ರಮೇಶ್ ಜಾರಕಿ ಹೊಳಿ ಷಡ್ಯಂತರಕ್ಕೆ ಬಲಿ ಆಗಿರೋದು ನಿಜ ಎಂದು ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಶಾಸಕ ರಮೇಶ್ ಜಾರಕಿಹೊಳಿ ಷಡ್ಯಂತರಕ್ಕೆ ಬಲಿಯಾಗಿರುವುದು ನಿಜ, ಆದರೂ ಅವರಿಗೆ ನ್ಯಾಯ ಕೊಡುವಲ್ಲಿ ದುರುದ್ದೇಶದಿಂದಲೇ ವಿಳಂಭ ಮಾಡಲಾಗುತ್ತಿದೆ ಎಂದು ಹೇಳಿದರು.
ಸಚಿವ ಶ್ರೀರಾಮುಲು ಪಿಎ ವಿರುದ್ಧ ದೂರು ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಪಿ.ಯೋಗೇಶ್ವರ್, ಅಂಗೈ ಹುಣ್ಣಿಗೆ ಕನ್ನಡಿ ಯಾಕೆ? ಆತನನ್ನು ಕರೆದು ಹೇಳಬಹುದಿತ್ತು. ದೂರು ಕೊಡುವ ಅಗತ್ಯವಿರಲಿಲ್ಲ ಎಂದರು.







