ಬೆಂಗಳೂರು: ಯುವಕನ ಕೈ ಕತ್ತರಿಸಿದ ಆರೋಪ; ಮೂವರು ಆರೋಪಿಗಳ ಬಂಧನ

ಬೆಂಗಳೂರು, ಜು.4: ದ್ವಿಚಕ್ರ ವಾಹನ ಮಾರಾಟ ವಿಚಾರವಾಗಿ ಜಗಳ ಮಾಡಿಕೊಂಡು ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಡ್ರ್ಯಾಗರ್ ನಿಂದ ಕೈ ಕತ್ತರಿಸಿದ ಮೂವರು ಕಿಡಿಗೇಡಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬ್ಯಾಟರಾಯನಪುರ ನಿವಾಸಿಗಳಾದ ನವೀನ್(30), ವಿನೋದ್(24) ಮತ್ತು ಚಾಂದ್ ಪಾಷಾ(30) ಎಂದು ಗುರುತಿಸಲಾಗಿದೆ. ಆರೋಪಿಗಳು ಕಳೆದ ಜೂ.30ರಂದು ಬ್ಯಾಟರಾಯನಪುರ ನಿವಾಸಿ ಚಂದನ್ ಸಿಂಗ್ (29) ಮೇಲೆ ಹಲ್ಲೆ ನಡೆಸಿದ್ದರು.
ಆರೋಪಿಗಳು ಚಂದನ್ ಸಿಂಗ್, ಮಹೇಂದ್ರ ಎನ್ನುವವರ ಜೊತೆ ಸೇರಿಕೊಂಡು ಬ್ಯಾಟರಾಯನಪುರದಲ್ಲಿ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನಗಳ ಮಾರಾಟ ವ್ಯಾಪಾರ ನಡೆಸುತ್ತಿದ್ದರು. ಆರೋಪಿ ವಿನೋದ್ ಕೆಲ ತಿಂಗಳ ಹಿಂದೆ 20 ಸಾವಿರ ರೂ. ಮುಂಗಡ ಕೊಟ್ಟು ಡಿಯೋ ಬೈಕ್ ಕೊಡುವಂತೆ ಹೇಳಿದ್ದನು. ಆದರೆ, ಲಾಕ್‍ಡೌನ್‍ನಿಂದ ಅಂಗಡಿ ತೆರೆದಿರಲಿಲ್ಲ. ಜೂನ್ 30ರ ರಾತ್ರಿ ಅಂಗಡಿ ಬಳಿ ಬಂದ ಆರೋಪಿಗಳು ಕೂಡಲೇ ಬೈಕ್ ಕೊಡುವಂತೆ ಒತ್ತಾಯಿಸಿದ್ದರು.
ಆದರೆ, ಚಂದನ್‍ಸಿಂಗ್, ಒಂದೆರಡು ದಿನ ಕಾಲಾವಕಾಶ ಕೋರಿದ್ದರಿಂದ ಆಕ್ರೋಶಗೊಂಡ ಆರೋಪಿಗಳು ಮಾರಕಾಸ್ತ್ರಗಳಿಂದ ಚಂದನ್ ಸಿಂಗ್ ಕೈ, ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.





