ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಸೂಚನೆ

ಬೆಂಗಳೂರು, ಜು.4: ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಉಪನಿರ್ದೇಶಕರು ಜು.7ರವರೆಗೆ ಸೂಕ್ತ ಪ್ರಗತಿಯನ್ನು ಸಾಧಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದಿರುವ ಇಲಾಖೆಯ ನಿರ್ದೇಶಕರು, ಬೆಂಗಳೂರು ವಿಭಾಗದ ಬೆಂಗಳೂರು ದಕ್ಷಿಣ(ಶೇ.43), ಬೆಂಗಳೂರು ಉತ್ತರ(ಶೇ.15.78), ಬೆಂಗಳೂರು ಗ್ರಾಮಾಂತರ(ಶೇ.21.74) ಕನಿಷ್ಟ ದಾಖಲಾತಿ ಹಾಗೂ ಮೈಸೂರು ವಿಭಾಗದಲ್ಲಿ ಮೈಸೂರು(ಶೇ.19.93, ಶಿವಮೊಗ್ಗ ಶೇ.20.99, ಚಿಕ್ಕಮಗಳೂರು ಶೇ.27.84) ಕನಿಷ್ಠ ದಾಖಲಾತಿ ಇದೆ.
ಶಾಲೆಗಳಲ್ಲಿ ಕನಿಷ್ಟ ದಾಖಲಾತಿ ಆದರೆ ಮಕ್ಕಳಿಗೆ ಪರ್ಯಾಯ ಮಾರ್ಗದಿಂದ ಶಿಕ್ಷಣ ನೀಡುವುದು, ಅಭಿವೃದ್ದಿ ಕಾರ್ಯಗಳಾದ ಮಧ್ಯಾಹ್ನ ಉಪಾಹಾರ ನೀಡುವಿಕೆ, ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆ, ವಿದ್ಯಾರ್ಥಿ ವೇತನ ನೀಡಿಕೆ ಮುಂತಾದವುಗಳ ಜತೆಗೆ ವರ್ಗಾವಣೆ ಮತ್ತಿತರ ಕಾರ್ಯಕ್ರಮಗಳಿಗೆ ತೊಂದರೆ ಉಂಟಾಗಲಿದೆ. ಹೀಗಾಗಿ ಮಕ್ಕಳ ನೋಂದಣಿ ಸಂಖ್ಯೆ ಹೆಚ್ಚಿಸಬೇಕಾದ ಅಗತ್ಯವಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇಲಾಖೆಯ ನಿರ್ದೇಶಕರು ಸೂಚಿಸಿದ್ದಾರೆ.





