ಜು. 5ರಂದು ಬಸ್ ಮಾಲಕರೊಂದಿಗೆ ಸಭೆ: ದ.ಕ. ಜಿಲ್ಲಾಧಿಕಾರಿ
ಮಂಗಳೂರು, ಜು.4: ಖಾಸಗಿ ಬಸ್ ಪ್ರಯಾಣ ದರಕ್ಕೆ ಸಂಬಂಧಿಸಿ ಜು.5ರಂದು ಬಸ್ ಮಾಲಕರ ಸಂಘದ ಮುಖಂಡರ ಜೊತೆ ಸಭೆ ನಡೆಸಲಾಗುವುದು. ಅಲ್ಲದೆ ದರ ನಿಗದಿಗೆ ಸಂಬಂಧಿಸಿ ಈ ವಾರದೊಳಗೆ ಆರ್‌ಟಿಎ ಸಭೆಯನ್ನು ಕರೆಯಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಕಳೆದ ನಾಲ್ಕು ದಿನದ ಹಿಂದೆ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರವನ್ನು ಏಕಪಕ್ಷೀಯವಾಗಿ ಏರಿಕೆ ಮಾಡಲಾಗಿತ್ತು. ಇದೀಗ ಬಸ್‌ಗಳಲ್ಲಿ ಆಸನ ಇರುವಷ್ಟು ಮಂದಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಏರಿಸಲ್ಪಟ್ಟ ದರದ ಬದಲಾಗಿ ಈ ಹಿಂದಿನ ಪ್ರಯಾಣ ದರವನ್ನೇ ಮುಂದುವರಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿದ ಸಂದರ್ಭ ಬಸ್ ಪ್ರಯಾಣ ದರ ಏರಿಕೆಗೆ ಜಿಲ್ಲಾಧಿಕಾರಿ ಮೌನ ಸಮ್ಮತಿ ನೀಡಿದ್ದರು. ಇದೀಗ ಬಸ್‌ಗಳಲ್ಲಿ ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿರುವುದರಿಂದ ಈ ಹಿಂದಿನ ಬಸ್ ಪ್ರಯಾಣ ದರವನ್ನೇ ನಿಗದಿಪಡಿಸಬೇಕು ಎಂಬ ಬೇಡಿಕೆ ಕೇಳಿ ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಜು.5ರಂದು ಬಸ್ ಮಾಲಕರನ್ನು ತುರ್ತು ಸಭೆ ಕರೆದಿದ್ದಾರೆ.





