ಕೋವಿಡ್‌ನಿಂದಾಗಿ ಸಂದರ್ಶನ ವಿಳಂಬ: ನೊಂದ ನಾಗರಿಕ ಸೇವಾ ಆಕಾಂಕ್ಷಿ ಆತ್ಮಹತ್ಯೆ

ಪುಣೆ,ಜು.4: ಕೋವಿಡ್19 ಹಾವಳಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಹಂತದ ಸಂದರ್ಶನ ನಡೆಯದೆ ಇದ್ದುದಕ್ಕಾಗಿ ನೊಂದ 24 ವರ್ಷ ವಯಸ್ಸಿನ ಉದ್ಯೋಗಾಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣೆಯಲ್ಲಿ ನಡೆದಿದೆ.
ಸಿವಿಎಲ್ ಎಂಜಿನಿಯರಿಂಗ್ ಡಿಪ್ಲೊಮಾ ಮಾಡಿರುವ ಸ್ವಪನಿಲ್ ಲೊಂಕರ್ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿ. ಆತ 2019ನೇ ಸಾಲಿನ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ಪ್ರಾಥಮಿಕ ಹಾಗೂ ಮುಖ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು ಮತ್ತು ಅಂತಿಮ ಹಂತದ ಸಂದರ್ಶನದ ನಿರೀಕ್ಷೆಯಲ್ಲಿದ್ದರು. ಅವರು 2020ನೇ ಸಾಲಿನ ಪ್ರಾಥಮಿಕ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಿದ್ದರೆಂದು ಹದಪ್ಸರ್ ಪೊಲೀಸ್ ಠಾಣಾಧಿಕಾರಿಯೊಬ್ಬರು ತಿಳಿಸಿದ್ದರು.
ಅಂತಿಮ ಹಂತದ ಸಂದರ್ಶನ ನಡೆಯದೆ ಇದ್ದುದರಿಂದ ತನಗೆ ನಕಾರಾತ್ಮಕತೆಯ ಭಾವನೆಯುಂಟಾಗಿದೆ ಲೊಂಕರ್ ಅವರು ಬರೆದಿಟ್ಟಿರುವ ಆತ್ಮಹತ್ಯಾಪತ್ರದಲ್ಲಿ ತಿಳಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ. ತನ್ನ ನೇಮಕಾತಿಗೆ ಅರ್ಹತಾ ವಯಸ್ಸು ಮೀರಿಹೋಗುವ ಅಪಾಯವನ್ನು ತಾನು ಎದುರಿಸುತ್ತಿದ್ದು, ತನ್ನನ್ನು ಖಿನ್ನತೆ ಕಾಡುತ್ತಿದೆ ಮತ್ತು ಕುಟುಂಬಿಕರು ತನ್ನ ಬಗ್ಗೆ ಬಹಳಷ್ಟು ನಿರೀಕ್ಷೆಯಿಟ್ಟಿದ್ದಾರೆಂದು ಪತ್ರದಲ್ಲಿ ಅವರು ಬರೆದಿರುವುದಾಗಿ ಪೊಲೀಸರು ಹೇಳಿದ್ದಾರೆ.





