ಎಜೆಪಿ ಜೊತೆ ಮೈತ್ರಿ ಅಂತ್ಯ: ರಜ್ಜೋರ್ ದಳ ವರಿಷ್ಠ ಅಖಿಲ್ ಗೊಗೋಯಿ ಘೋಷಣೆ

ಗುವಾಹಟಿ,ಜು.4: ತನ್ನ ಪಕ್ಷವು ಪ್ರಾದೇಶಿಕ ಪಕ್ಷವಾದ ಅಸ್ಸಾಂ ಜಾತೀಯ ಪರಿಷತ್ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿರುವುದಾಗಿ ರಜ್ಜೋರ್ ದಳದ ಅಧ್ಯಕ್ಷ ಅಖಿಲ್ ಗೊಗೋಯಿ ರವಿವಾರ ಘೋಷಿಸಿದ್ದಾರೆ.
ಪೌರತ್ವ ವಿರೋಧಿ ಕಾಯ್ದೆ ಆಂದೋಲನದ ಸಂದರ್ಭದಲ್ಲಿ ರಜ್ಜೋರ್ ದಳ ಹಾಗೂ ಅಸ್ಸಾಂ ಜಾತೀಯ ಪರಿಷತ್ ಪಕ್ಷಗಳು ಅಸ್ಸಾಂನಲ್ಲಿ ಜನ್ಮತಾಳಿದ್ದವು. ಈ ವರ್ಷದ ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾ ವಣೆಯಲ್ಲಿ ಈ ಎರಡೂ ಪಕ್ಷಗಳು ಮೈತ್ರಿಯೇರ್ಪಡಿಸಿಕೊಂಡು ಸ್ಪರ್ಧಿಸಿದ್ದವು. ಚುನಾವಣೆಯಲ್ಲಿ ಎಜೆಪಿ ಒಂದೇ ಒಂದು ಸ್ಥಾನವನ್ನು ಪಡೆಯಲು ವಿಫಲವಾಗಿದ್ದರೆ, ಅಖಿಲ್ ಗೊಗೋಯಿ ಗೆಲುವು ಸಾಧಿಸುವ ಮೂಲಕ ರಜ್ಜೋರಿದಳ ಒಂದು ಸ್ಥಾನವನ್ನು ಪಡೆಯುವಲ್ಲಿ ಸಫಲವಾಗಿತ್ತು.
ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷರೂ ಆದ ಲುರಿನ್‌ಜ್ಯೋತಿ ನೇತೃತ್ವದ ಎಜೆಪಿ ಜೊತೆ ತನ್ನ ಪಕ್ಷವು ಮೈತ್ರಿಯನ್ನು ಕಡಿದುಕೊಂಡಿರುವುದನ್ನು ಗೊಗೋಯಿ ಅವರು ರವಿವಾರ ಸಂದರ್ಶನವೊಂದರಲ್ಲಿ ದೃಢಪಡಿಸಿದ್ದಾರೆ. ‘‘ ಚುನಾವಣಾ ಸಂದರ್ಭದಲ್ಲಿಯೂ ನಮ್ಮ ನಡುವೆ ಮೈತ್ರಿಯಿರಲಿಲ್ಲ. ಚುನಾವಣೆಯ ಮಧ್ಯದಲ್ಲೇ ನಾವು ಮೈತ್ರಿಕೂಟವನ್ನು ಕಡಿದುಕೊಂಡಿದ್ದೆವು. ಆಗ ಸಂಯುಕ್ತವಾದ ಪ್ರತಿಪಕ್ಷ ವೇದಿಕೆಯಿರಲಿಲ್ಲ. ಹೀಗಾಗಿ ನಾವು ಬೇರ್ಪಟ್ಟಿದ್ದೇವು ಎಂದು ಗೊಗೊಯಿ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಸ್ಸಾಂ ಚುನಾವಣೆಯ ವೇಳೆ ಸೀಟು ಹಂಚಿಕೆಯ ವಿಚಾರದಲ್ಲಿ ಈ ಎರಡೂ ಪಕ್ಷಗಳ ನಡುವೆ ಒಡಕು ಮೂಡಿರುವ ವದಂತಿಗಳು ಹರಡಿದ್ದವಾದರೂ, ತಾವು ಮೈತ್ರಿಯನ್ನು ಕಡಿದುಕೊಂಡಿರುವ ಬಗ್ಗೆ ಅವು ಘೋಷಿಸಿರಲಿಲ್ಲ.
ಅಸ್ಸಾಂ ವಿಧಾನಸಭೆಯ 126 ಕ್ಷೇತ್ರಗಳ ಪೈಕಿ 83 ಕ್ಷೇತ್ರಗಳಲ್ಲಿ ಎಜೆಪಿ ಸ್ಪರ್ಧಿಸಿದ್ದರೆ, ರಜ್ಜೋರ್ ದಳ 38ರಲ್ಲಿ ಗೆಲುವು ಸಾಧಿಸಿತ್ತು. ಉಳಿದ 16 ಕ್ಷೇತ್ರಗಳಲ್ಲಿ ಉಭಯಪಕ್ಷಗಳೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಇದರಿಂದಾಗಿ ಸಿಎಎ ವಿರೋಧಿ ಮತಗಳು ಗಣನೀಯವಾಗಿ ವಿಭಜನೆಗೊಂಡಿದ್ದವು ಎನ್ನಲಾಗುತ್ತಿದೆ.







