ಸಿದ್ದಲಿಂಗಯ್ಯ ದಲಿತ ಕವಿಯೇ?
ಮಾನ್ಯರೇ,
ದಲಿತ ಕವಿ ಸಿದ್ದಲಿಂಗಯ್ಯ ಅವರು ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. ಆದರೆ ಅವರ ಬಗ್ಗೆ ಕೆಲವರು ಮಾತನಾಡುತ್ತಾ ‘ಸಿದ್ದಲಿಂಗಯ್ಯ ಅವರನ್ನು ದಲಿತ ಸಮುದಾಯಕ್ಕೆ ಸೀಮಿತಗೊಳಿಸಬೇಡಿ. ಅವರು ಕನ್ನಡದ ಕವಿ’ ಎಂದು ಹೇಳಿದ್ದಾರೆ. ದಲಿತ ಎನ್ನುವುದು ಒಂದು ಜಾತಿಯಲ್ಲ. ಅದು ಸಂವೇದನೆ. ಸಿದ್ದಲಿಂಗಯ್ಯ ಅವರು ‘ದಲಿತರು ಬಂದರು ರಾಜ್ಯ ಕೊಡಿ’ ಎಂದು ಕೇಳಿದರೇ ಹೊರತು ‘ಕನ್ನಡಿಗರು ಬಂದರು ರಾಜ್ಯ ಕೊಡಿ’ ಎಂದು ಕೇಳಲಿಲ್ಲ. ದಲಿತ ಎನ್ನುವುದು ಶೋಷಿತ ಸಮುದಾಯವನ್ನು ಪ್ರತಿನಿಧಿಸುವ ಪದವೇ ಹೊರತು, ಜಾತಿ ಸೂಚಕವಲ್ಲ. ದಲಿತರ ನೋವು ನಲಿವುಗಳನ್ನು ಬರೆದು ಕವಿಯಾದ ಕಾರಣ ಅವರನ್ನು ದಲಿತ ಕವಿ ಎಂದು ಕರೆಯುವುದೇ ಸೂಕ್ತ.
ತಾವು ಪ್ರಚಾರಕ್ಕೆ ಬಂದ ಬಳಿಕ, ಸಿದ್ಧಾಂತದಲ್ಲಿ ಅವರು ರಾಜಿ ಮಾಡಿಕೊಂಡಿರಬಹುದು. ಆದರೆ ಇಂದು ಸಿದ್ದಲಿಂಗಯ್ಯ ಅವರನ್ನು ನಾವು ಕವಿಯಾಗಿ ಗುರುತಿಸುವುದು ದಲಿತ ಸಾಹಿತ್ಯದ ಉಚ್ಛ್ರಾಯ ಕಾಲದಲ್ಲಿ ಅವರು ಬರೆದ ಕವಿತೆಗಳಿಗಾಗಿ. ಅವರನ್ನು ಸರಕಾರ ಗುರುತಿಸಿ ಪದವಿ ಕೊಟ್ಟದ್ದು ಕೂಡ, ಈ ಕವಿತೆಗಳನ್ನು ಮನ್ನಿಸಿಯಾಗಿದೆ. ಅದಾದ ಬಳಿಕ ಸಿದ್ದಲಿಂಗಯ್ಯ ಬದಲಾಗಿರಬಹುದು. ಆದರೆ ಅವರ ಕವಿತೆಗಳು ಪ್ರತಿಪಾದಿಸುವ ದಲಿತ ಸಂವೇದನೆಗಳು ಬದಲಾಗಿಲ್ಲ. ನಮಗೆ ಅಧಿಕಾರಕ್ಕಾಗಿ ಮಾರಾಟವಾದ ಸಿದ್ದಲಿಂಗಯ್ಯ ಬೇಡ, ದಲಿತರ ಹಕ್ಕುಗಳಿಗಾಗಿ ಧ್ವನಿ ಎತ್ತಿದ ದಲಿತ ಕವಿ ಸಿದ್ದಲಿಂಗಯ್ಯ ಸಾಕು. ಆ ಸಿದ್ದಲಿಂಗಯ್ಯ ಅವರನ್ನು ಉಳಿಸಿ, ಬೆಳೆಸೋಣ.







