ಬೆಂಗಳೂರು: ಸ್ವಾಮಿ ವಿವೇಕಾನಂದರಿಗೆ ಯಡಿಯೂರಪ್ಪ ಪುಷ್ಪನಮನ

ಬೆಂಗಳೂರು, ಜು. 4: `ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರ ಪುಣ್ಯತಿಥಿಯಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸ್ಮರಿಸಿದರು.
ರವಿವಾರ ಇದೇ ಸಂದರ್ಭದಲ್ಲಿ ಸರಣಿ ಟ್ವೀಟ್ ಮಾಡಿರುವ ಯಡಿಯೂರಪ್ಪ, `ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ಭಾರತೀಯ ಚಿಂತನೆ ಮತ್ತು ತತ್ವಾದರ್ಶಗಳ ಬೆಳಕನ್ನು ಜಾಗತಿಕವಾಗಿ ಬೆಳಗಿದ ಅವರ ಸಮಾಜಮುಖಿ ಸಂದೇಶಗಳು ನಿರಂತರ ಸ್ಫೂರ್ತಿಯ ಚಿಲುಮೆಗಳಾಗಿವೆ' ಎಂದು ವಿವೇಕಾನಂದರನ್ನು ನೆನಪು ಮಾಡಿಕೊಂಡಿದ್ದಾರೆ.
`ಶಿಕ್ಷಣವು ಮನುಷ್ಯನಲ್ಲಿ ಈಗಾಗಲೇ ಪರಿಪೂರ್ಣತೆಯ ಅಭಿವ್ಯಕ್ತಿಯಾಗಿದೆ. ಮನಸ್ಸಿನ ಶಕ್ತಿ ಹೆಚ್ಚಾಗುತ್ತದೆ, ಬುದ್ಧಿಶಕ್ತಿ ವಿಸ್ತರಿಸಲ್ಪಡುತ್ತದೆ. ಆ ಮೂಲಕ ಒಬ್ಬರ ಸ್ವಂತ ಕಾಲುಗಳ ಮೇಲೆ ನಿಲ್ಲಬಹುದು ಎಂದು ನಾವು ಬಯಸುತ್ತೇವೆ' ಎನ್ನುವ ಸ್ವಾಮಿ ವಿವೇಕಾನಂದರ ಸಾಲುಗಳನ್ನು ಉಲ್ಲೇಖಿಸಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್, ಉತ್ತಮ ಜೀವನವನ್ನು ನಡೆಸಲು ವಿವೇಕಾನಂದರ ಆದರ್ಶಗಳು ದಾರಿದೀಪ ಆಗಿರಲಿ ಎಂದು ಸ್ಮರಿಸಿದ್ದಾರೆ.





