ಟ್ಯುನೀಶಿಯ ಬಳಿ ನೌಕಾ ದುರಂತ 43 ವಲಸೆ ಕಾರ್ಮಿಕರ ಮೃತ್ಯು

ಟ್ಯುನಿಸ್, ಜು.4: ಟ್ಯುನೀಶಿಯಾದ ಬಳಿ ನೌಕೆಯೊಂದು ಸಮುದ್ರದಲ್ಲಿ ಬಂಡೆಗೆ ಅಪ್ಪಳಿಸಿದ್ದರಿಂದ ಕನಿಷ್ಟ 43 ವಲಸೆ ಕಾರ್ಮಿಕರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಟ್ಯುನೀಷಿಯಾದ ಸುದ್ಧಿಸಂಸ್ಥೆ ವರದಿ ಮಾಡಿದೆ. ಲಿಬ್ಯಾದ ವಾಯವ್ಯದಲ್ಲಿರುವ ಝುವಾರ ನಗರದಿಂದ ಹೊರಟಿದ್ದ ಈ ನೌಕೆಯಲ್ಲಿ ಈಜಿಪ್ಟ್, ಸುಡಾನ್, ಎರಿಟ್ರಿಯಾ ಮತ್ತು ಬಾಂಗ್ಲಾದೇಶದ ವಲಸೆ ಕಾರ್ಮಿಕರಿದ್ದು ಮೆಡಿಟರೇನಿಯನ್ ಸಮುದ್ರ ದಾಟಿ ಇಟಲಿಗೆ ತೆರಳಲು ನಿರ್ಧರಿಸಿದ್ದರು. ನೌಕೆಯಲ್ಲಿದ್ದ ಇತರ 84 ಕಾರ್ಮಿಕರನ್ನು ರಕ್ಷಣಾ ಪಡೆ ರಕ್ಷಿಸಿದೆ ಎಂದು ಮೂಲಗಳು ಹೇಳಿವೆ.
ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಬಡತನ ಮತ್ತು ನಿರಂತರ ಸಂಘರ್ಷದ ಸ್ಥಿತಿಯಿರುವುದರಿಂದ ಇತ್ತೀಚಿನ ದಿನಗಳಲ್ಲಿ ಸಾವಿರಾರು ಕಾರ್ಮಿಕರು ಮೆಡಿಟರೇನಿಯನ್ ಮೂಲಕ ಇತರ ದೇಶಗಳಿಗೆ ವಲಸೆ ಹೋಗುವ ಪ್ರಕರಣ ಹೆಚ್ಚಿದೆ. ಜೊತೆಗೆ, ಸಮುದ್ರದಲ್ಲಿ ನೌಕೆ ಮುಳುಗಿ ನಡೆಯುವ ದುರಂತ ಪ್ರಕರಣವೂ ಹೆಚ್ಚಿದೆ. 2021ರ ಆರಂಭದಿಂದ ಜೂನ್ ಅಂತ್ಯದವರೆಗೆ ಇಟಲಿಗೆ ಸುಮಾರು 19,800 ಕಾರ್ಮಿಕರು ವಲಸೆ ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.





