ಮೋದಿ ಜತೆಗಿನ ಸಭೆಯ ಫಲಿತಾಂಶ ನಿರಾಶಾಜನಕ: ಗುಪ್ಕರ್ ಒಕ್ಕೂಟ

ಶ್ರೀನಗರ, ಜು.5: ಜೂನ್ 24ರಂದು ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗಿನ ಸಭೆಯ ಫಲಿತಾಂಶದಿಂದ ನಿರಾಶೆಯಾಗಿದೆ ಎಂದು ಗುಪ್ಕರ್ ಘೋಷಣೆಗಾಗಿನ ಜನತಾ ಒಕ್ಕೂಟ(ಪಿಎಜಿಡಿ)ದ ಮುಖಂಡರು ಸೋಮವಾರ ಹೇಳಿದ್ದಾರೆ. ಸಭೆಯಲ್ಲಿ ವಿಶ್ವಾಸ ವೃದ್ಧಿಸುವ ಕ್ರಮಗಳಾದ ಜೈಲಿನಿಂದ ರಾಜಕೀಯ ಮುಖಂಡರ ಸಹಿತ ಮುಖಂಡರ ಬಿಡುಗಡೆ, 2019ರಿಂದ ಜಮ್ಮು ಕಾಶ್ಮೀರದಲ್ಲಿರುವ ನಿರ್ಬಂಧ, ದಿಗ್ಬಂಧನದ ವಾತಾವರಣ ಅಂತ್ಯಗೊಳಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ ಎಂದು ಗುಪ್ಕರ್ ಒಕ್ಕೂಟದ ವಕ್ತಾರ ಎಂವೈ ತಾರಿಗಾಮಿ ಹೇಳಿದ್ದಾರೆ.
ಕಾಶ್ಮೀರದಲ್ಲಿರುವ ಸಮಸ್ಯೆಯಿಂದ ಅತೀ ಹೆಚ್ಚು ತೊಂದರೆಗೊಳಗಾದ ರಾಜ್ಯದ ಜನತೆಯನ್ನು ತಲುಪಬೇಕಿದ್ದರೆ ವಿಶ್ವಾಸ ವೃದ್ಧಿಸುವ ಕ್ರಮಗಳು ಅತ್ಯಗತ್ಯವಾಗಿದೆ ಎಂದು ಸುದ್ಧಿಗೋಷ್ಟಿಯಲ್ಲಿ ತಾರಿಗಾಮಿ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಐದು ಪ್ರಮುಖ ರಾಜಕೀಯ ಪಕ್ಷಗಳ ಒಕ್ಕೂಟವಾಗಿರುವ ಗುಪ್ಕರ್ ಒಕ್ಕೂಟದ ಮುಖಂಡರಾದ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಹಾಗೂ ಇತರ ಸದಸ್ಯರು ಸುದ್ಧಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Next Story





