ಬೆಂಗಳೂರು: 1.85 ಕೋಟಿ ಮೌಲ್ಯದ ಮಾದಕ ವಸ್ತು ವಶ
ಬೆಂಗಳೂರು, ಜು.5: ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ನಡೆಸಿರುವ ಆಗ್ನೇಯ ವಿಭಾಗದ ಪೊಲೀಸರು, 1.85 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದ ಅನೀಸ್(29), ಕೋರಮಂಗಲದ ಜಕ್ಕಸಂದ್ರದ ಲೋಕೇಶ್(25), ಮೋಹನ್ ಕುಮಾರ್(23), ಗುಡ್ಡದಹಳ್ಳಿಯ ಝಬೀ(24) ಎಂಬುವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರಗನ್ ಹೇಳಿದರು.
ಮಡಿವಾಳದ ಜೋಗಿ ಕಾಲನಿಯ ಪಾರ್ಕ್ ಬಳಿ ನಿಲ್ಲಿಸಿಕೊಂಡಿದ್ದ ಕಾರನ್ನು ಅನುಮಾನದ ಮೇಲೆ ಮಡಿವಾಳ ಪೊಲೀಸರು ತಪಾಸಣೆ ಕೈಗೊಂಡಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಂದ ವಶಪಡಿಸಿಕೊಂಡಿರುವ ಹ್ಯಾಶ್ ಆಯಿಲ್ ಮಾದಕ ವ್ಯಸನಿಗಳಿಂದ ಭಾರೀ ಪ್ರಮಾಣದ ಬೇಡಿಕೆ ಇರಲಿದ್ದು ಇದರ ಬೆಲೆ ಒಂದು ಲೀಟರ್‍ಗೆ 30 ಲಕ್ಷದಿಂದ 1 ಕೋಟಿಯವರೆಗೆ ಇರಲಿದೆ ಎಂದು ತಿಳಿಸಿದರು.
ಸದ್ಯ ಬಂಧಿತ ಆರೋಪಿಗಳಿಂದ 1.85 ಕೋಟಿ ರೂ. ಮೌಲ್ಯದ 3 ಲೀಟರ್ ಹ್ಯಾಶ್ ಆಯಿಲ್ 4 ಕೆಜಿ ಗಾಂಜಾ, ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.





