ಐಟಿ ನಿಯಮಗಳನ್ನು ಪಾಲಿಸಲು ಟ್ವಿಟರ್ ವಿಫಲ: ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರ

ಹೊಸದಿಲ್ಲಿ,ಜು.5: ಟ್ವಟರ್ ದೇಶದ ಕಾನೂನು ಆಗಿರುವ ಐಟಿ ನಿಯಮಗಳನ್ನು ಪಾಲಿಸುವಲ್ಲಿ ವಿಫಲಗೊಂಡಿದೆ ಎಂದು ಕೇಂದ್ರ ಸರಕಾರವು ಸೋಮವಾರ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ಹೇಳಿದೆ.
2021ರ ಐಟಿ ನಿಯಮಗಳನ್ನು ಪಾಲಿಸಲು ಎಲ್ಲ ಪ್ರಮುಖ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಮೂರು ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತಾದರೂ, ಟ್ವಿಟರ್ ಇದರಲ್ಲಿ ವಿಫಲಗೊಂಡಿದೆ. ಜು.1ಕ್ಕೆ ಇದ್ದಂತೆ ಅದು ನಿಯಮಗಳಲ್ಲಿ ಕಡ್ಡಾಯಗೊಳಿಸಿರುವಂತೆ ಮಧ್ಯಂತರ ಆಧಾರದಲ್ಲಾದರೂ ಮುಖ್ಯ ಪಾಲನಾ ಅಧಿಕಾರಿ,ನಿವಾಸಿ ಕುಂದುಕೊರತೆ ಅಧಿಕಾರಿ,ನೋಡಲ್ ಸಂಪರ್ಕ ವ್ಯಕ್ತಿಯನ್ನು ನೇಮಕಗೊಳಿಸಿಲ್ಲ ಮತ್ತು ತನ್ನ ವೆಬ್ಸೈಟ್ನಲ್ಲಿ ತನ್ನ ಭೌತಿಕ ಸಂಪರ್ಕ ವಿಳಾಸವನ್ನೂ ತೋರಿಸುತ್ತಿಲ್ಲ ಎಂದು ಅದು ತಿಳಿಸಿದೆ.
ಐಟಿ ನಿಯಮಗಳು ನೆಲದ ಕಾನೂನು ಆಗಿದ್ದು,ಅದನ್ನು ಟ್ವಿಟರ್ ಪಾಲಿಸಬೇಕು. ಇದಕ್ಕೆ ತಪ್ಪಿದರೆ ಅದು ಐಟಿ ನಿಯಮಗಳ ಉಲ್ಲಂಘನೆಯಾಗುತ್ತದೆ ಮತ್ತು ಐಟಿ ಕಾಯ್ದೆ,2000ರ ಕಲಂ 79(1) ಅಡಿ ನೀಡಲಾಗಿರುವ ರಕ್ಷಣೆಯನ್ನು ಟ್ವಿಟರ್ ಕಳೆದುಕೊಳ್ಳುತ್ತದೆ ಎಂದು ಕೇಂದ್ರವು ಅಫಿಡವಿಟ್ನಲ್ಲಿ ಸ್ಪಷ್ಟಪಡಿಸಿದೆ.





