2022ರ ತಂಡಕ್ಕಾಗಿ ಎರಡು ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್ಇ ನಿರ್ಧಾರ

ಹೊಸದಿಲ್ಲಿ,ಜು.5: ಕೋವಿಡ್ ಸಾಂಕ್ರಾಮಿಕ ಮತ್ತು ಕಳೆದೆರಡು ವರ್ಷಗಳಿಂದ ಪರೀಕ್ಷೆಗಳ ಕುರಿತು ಅನಿರ್ದಿಷ್ಟತೆ ನಡುವೆ ಸಿಬಿಎಸ್ಇ ತನ್ನ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ವಿಧಾನವನ್ನು ಬದಲಿಸಿದೆ.
2021-22ನೇ ಶೈಕ್ಷಣಿಕ ವರ್ಷದ ತಂಡಕ್ಕಾಗಿ ಅದು ಟರ್ಮ್-1 ಮತ್ತು ಟರ್ಮ್-2 ಹೀಗೆ ಎರಡು ಬೋರ್ಡ್ ಪರೀಕ್ಷೆಗಳನ್ನು ನಡೆಸಲಿದೆ. ಪ್ರತಿ ಪರೀಕ್ಷೆಯು ಆಯಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲಾದ ಶೇ.50ರಷ್ಟು ಪಠ್ಯಕ್ರಮದ ಮೇಲೆ ನಡೆಯಲಿದೆ.
ಪ್ರತಿ ಟರ್ಮ್ ನ ಅಂತ್ಯದಲ್ಲಿ ನಡೆಯುವ ಪರೀಕ್ಷೆಗಳು 90 ನಿಮಿಷಗಳ ಅವಧಿಯದಾಗಿರುತ್ತವೆ.
ವಿದ್ಯಾರ್ಥಿಯ ಅಂತಿಮ ಫಲಿತಾಂಶ ಪ್ರಕಟಣೆಗೆ ಎರಡೂ ಪರೀಕ್ಷೆಗಳಲ್ಲಿಯ ಅಂಕಗಳನ್ನು ಪರಿಗಣಿಸಲಾಗುತ್ತದೆ. ಟರ್ಮ್-1 ಪರೀಕ್ಷೆ ನವೆಂಬರ್-ಡಿಸೆಂಬರ್ ನಲ್ಲಿ ಮತ್ತು ಟರ್ಮ್-2 ಪರೀಕ್ಷೆ ಮಾರ್ಚ್-ಎಪ್ರಿಲ್ನಲ್ಲಿ ನಡೆಯುತ್ತವೆ.
ಪರೀಕ್ಷೆಗಳ ಮಾದರಿಯನ್ನೂ ಬದಲಿಸಲಾಗಿದೆ. ಸಿಬಿಎಸ್ಇ ಟರ್ಮ್-1 ಪರೀಕ್ಷೆ ಬಹು ಆಯ್ಕೆಗಳ ಪ್ರಶ್ನೆಗಳನ್ನು ಒಳಗೊಂಡಿದ್ದರೆ ಟರ್ಮ್-2 ಪರೀಕ್ಷೆ ವಿವಿಧ ರೂಪಗಳ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. 2022ರ ಮಾರ್ಚ್ ನಲ್ಲಿ ಪರಿಸ್ಥಿತಿ ಪೂರಕವಾಗಿರದಿದ್ದರೆ ಟರ್ಮ್-2 ರಲ್ಲಿ ಎರಡು ಗಂಟೆ ಅವಧಿಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
ನೂತನ ಮಾನದಂಡದಂತೆ 2021-22ನೇ ಸಾಲಿನ ಪಠ್ಯಕ್ರಮವನ್ನು ಎರಡು ಟರ್ಮ್ಗಳಲ್ಲಿ ವಿಭಜಿಸಲಾಗುತ್ತದೆ ಮತ್ತು ಪ್ರತಿ ಟರ್ಮ್ನಲ್ಲಿ ಶೇ.50ರಷ್ಟು ಪಠ್ಯಕ್ರಮವನ್ನು ಬೋಧಿಸಲಾಗುತ್ತದೆ.







