ತಾಲಿಬಾನ್ ವಿರುದ್ಧ ಹೋರಾಡಿದ ಬಳಿಕ ತಜಿಕಿಸ್ತಾನಕ್ಕೆ ಪರಾರಿಯಾದ ಅಫ್ಘಾನ್ ಸೈನಿಕರು
ಕಾಬೂಲ್ (ಅಫ್ಘಾನಿಸ್ತಾನ), ಜು. 5: ತಾಲಿಬಾನ್ ಉಗ್ರರ ಜೊತೆ ಹೋರಾಡಿದ ಬಳಿಕ, 1,000ಕ್ಕೂ ಅಧಿಕ ಅಫ್ಘಾನ್ ಸೈನಿಕರು ಸೋಮವಾರ ನೆರೆಯ ತಜಿಕಿಸ್ತಾನಕ್ಕೆ ಪಲಾಯನಗೈದಿದ್ದಾರೆ. ಯುದ್ಧದಲ್ಲಿ ಉಗ್ರರ ಕೈಮೇಲಾಗುತ್ತಿದ್ದಂತೆಯೇ ಸೈನಿಕರು ಹಿಮ್ಮೆಟಿದ್ದಾರೆ.
ಅಫ್ಘಾನಿಸ್ತಾನದ ಉತ್ತರದ ಗ್ರಾಮೀಣ ಪ್ರದೇಶಗಳಲ್ಲಿ ಅಫ್ಘಾನ್ ಸೈನಿಕರು ಮತ್ತು ಉಗ್ರರ ನಡುವಿನ ಕಾಳಗ ಹೆಚ್ಚುತ್ತಿರುವಂತೆಯೇ ಈ ಬೆಳವಣಗೆ ನಡೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ತಾಲಿಬಾನ್ ಡಝನ್ಗಟ್ಟಳೆ ಜಿಲ್ಲೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಹಾಗಾಗಿ, ಅಫ್ಘಾನಿಸ್ತಾನದಲ್ಲಿ ಸೈನಿಕರು ಬಿಕ್ಕಟ್ಟು ಎದುರಿಸುತ್ತಿರುವುದು ಸ್ಪಷ್ಟವಾಗಿದೆ.
ಅವರು ಶರಣಾಗಲು ಬಯಸಲಿಲ್ಲ. ಹೆಚ್ಚುವರಿ ಪಡೆಗಳನ್ನು ಕಳುಹಿಸುವಂತೆ ಅವರು ಕೋರಿಕೆ ಸಲ್ಲಿಸಿದ್ದರು. ಆದರೆ, ಅವರ ಮನವಿಯನ್ನು ಕಡೆಗಣಿಸಲಾಗಿತ್ತುಎಂದು ಬಡಾಖ್ಶಾನ್ ಪ್ರಾಂತದಲ್ಲಿರುವ ಬೆಟಾಲಿಯನ್ ಒಂದರ ಸೈನಿಕರೊಬ್ಬರು ಹೇಳಿದರು. ಇದೇ ಬೆಟಾಲಿಯನ್ಗೆ ಸೇರಿದ ಸೈನಿಕರು ಪರಾರಿಯಾಗಿರುವುದು.
ತಾಲಿಬಾನ್ ಜೊತೆಗೆ ರಾತ್ರಿ ಯುದ್ಧ ನಡೆಸಿದ ಬಳಿಕ 1,037 ಸರಕಾರಿ ಸೈನಿಕರು ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ತಜಿಕಿಸ್ತಾನಕ್ಕೆ ಪಲಾಯನಗೈದರು ಎಂದು ತಜಿಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ತಿಳಿಸಿದೆ.





