ಸಂಸದೆ ಸುಮಲತಾ ಬಗ್ಗೆ ಹೇಳಿಕೆ ಕುಮಾರಸ್ವಾಮಿಗೆ ಶೋಭೆ ತರುವುದಿಲ್ಲ: ಸಚಿವ ಡಾ.ನಾರಾಯಣಗೌಡ

ಚಿಕ್ಕಮಗಳೂರು, ಜು.5: ಕೆಆರ್‍ಎಸ್ ಡ್ಯಾಂ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಅವರನ್ನು ಕೆಆರ್‍ಎಸ್ ಬಾಗಿಲಿಗೆ ಅಡ್ಡಲಾಗಿ ಮಲಗಿಸಬೇಕು ಎಂಬ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ. ಆ ರೀತಿ ಮಾತನಾಡುವುದು ತಪ್ಪು. ಅದು ನಮಗೆ ಶೋಭೆ ತರುವುದಿಲ್ಲ. ಕೆಆರ್‍ಎಸ್‍ನಲ್ಲಿ ಯಾವುದೇ ರೀತಿಯ ಬಿರುಕು ಬಿಟ್ಟಿಲ್ಲ. ಹಳೆಯ ಕೆಲಸಗಳ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ತಜ್ಞರನ್ನು ಕರೆಸಿ ಮಾತನಾಡುತ್ತೇನೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ನಾರಯಣ ಗೌಡ ಹೇಳಿದರು.
ಸೋಮವಾರ ಜಿಪಂ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಮಿ ಏನು ಹೇಳಿದ್ದರೋ ಗೊತ್ತಿಲ್ಲ. ಅವರು ಹಾಗೆ ಹೇಳಿದ್ದರೆ ಖಂಡತಾ ಅದು ತಪ್ಪು. ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅಯ್ಯನಕೆರೆಯಲ್ಲಿ ಜಲಸಾಹಸ ಕ್ರೀಡೆಗಳ ಆರಂಭಕ್ಕೆ ಸರಕಾರದಿಂದ 4.74 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. 1.50 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ ಎಂದ ಅವರು, ಜಿಲ್ಲೆಗೆ ಮಂಜೂರಾಗಿದ್ದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದ ಪೈಕಿ 14.79 ಕೋ. ರೂ. ಅನುದಾನ ಹಾಗೂ ಸಂಸದರ ನಿಧಿಯ ಪೈಕಿ 8.30 ಕೋ. ರೂ ಅನುದಾನವನ್ನು ಸಂಬಂಧಿಸಿದ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಖರ್ಚಾಗಿಲ್ಲ. ಇಲಾಖೆಗೆ ಬರುವ ಅನುದಾನ ಕೊರೋನದಿಂದ ಕಡಿಮೆಯಾಗಿದ್ದು, ಬಂದಿರುವ ಹಣವನ್ನು ಖರ್ಚು ಮಾಡದಿದ್ದಲ್ಲಿ ಸರಕಾರಕ್ಕೆ ಹಿಂದಕ್ಕೆ ಹೋಗುತ್ತದೆ. ಆದ್ದರಿಂದ ಖರ್ಚಾಗದಿರುವ ಹಣವನ್ನು ಉತ್ತಮ ಯೋಜನೆಗಳಿಗೆ ಬಳಸಲು ಸಭೆಯಲ್ಲಿ ಸೂಚನೆ ನೀಡಿದ್ದೇನೆ ಎಂದ ಅವರು, ಎಸ್ಸಿಪಿ, ಟಿಎಸ್ಪಿ ಯೋಜನೆಯಲ್ಲಿ ಸಾಕಷ್ಟು ಅನುದಾನ ಖರ್ಚಾಗದಿರುವುದು ಸಭೆಯಿಂದ ತಿಳಿದು ಬಂದಿದ್ದು, ಅನುದಾನದ ಸಮರ್ಪಕ ಬಳಕೆಗೆ ನಿರ್ದೇಶನ ನೀಡಿದ್ದೇನೆ ಎಂದರು.







