ಕೋವಿಡ್ ಸೋಂಕಿನಿಂದ ಮೃತಪಟ್ಟ ಬಿಇಎಲ್ ಉದ್ಯೋಗಿಗಳ ಕುಟುಂಬಕ್ಕೆ ನೆರವು: ಶಿವಕುಮಾರನ್
ಬೆಂಗಳೂರು, ಜು. 5: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಕಂಪೆನಿ ತನ್ನ ಉದ್ಯೋಗಿಗಳಿಗೆ ವಿಶೇಷ ಯೋಜನೆಯೊಂದನ್ನು ಪ್ರಕಟಿಸಿದ್ದು, ಸೋಂಕಿನಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬಕ್ಕೆ ನೆರವು ನೀಡಲು ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ಬಿಇಎಲ್ ನಿರ್ದೇಶಕ ಶಿವಕುಮಾರನ್ ಕೆ.ಎಂ. ತಿಳಿಸಿದ್ದಾರೆ.
ಸೋಮವಾರ ಈ ಸಂಬಂಧ ಮಾಹಿತಿ ನೀಡಿರುವ ಅವರು, `ಕೋವಿಡ್‍ನಿಂದ ಮೃತ ಉದ್ಯೋಗಿಗಳ ಪತಿ ಅಥವಾ ಪತ್ನಿ / ಮಕ್ಕಳ ಜೀವನೋದ್ಧಾರಕ್ಕೆ ಬೇಕಾದ ತರಬೇತಿ, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಗೆ ಬೆಂಬಲ ನೀಡುವುದಲ್ಲದೆ, ಕುಟುಂಬ ನಿರ್ವಹಿಸಲು ಮಾಸಿಕ ಹಣಕಾಸಿನ ಪಾವತಿಯನ್ನು ಮಾಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯಡಿ 2021ರ ಎಪ್ರಿಲ್ 1ರಿಂದ ಕೋವಿಡ್ ಮತ್ತು ಕೋವಿಡೇತರದಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬಕ್ಕೆ ಅನ್ವಯವಾಗಲಿದೆ' ಎಂದರು.
`ಹಣಕಾಸಿನ ನೆರವು ಮೃತ ಉದ್ಯೋಗಿಗಳು ಕೊನೆಯದಾಗಿ ಪಡೆದ ಮೂಲವೇತನ ಜೊತೆಗೆ ತುಟ್ಟಿ ಭತ್ಯೆ ಶೇ.50ಕ್ಕೆ ಸಮನಾದ ಎಕ್ಸ್‍ಗ್ರೇಷಿಯಾ ಪಾವತಿ ಮರಣ ಹೊಂದಿದ ದಿನಾಂಕದಿಂದ ನಿವೃತ್ತರಾಗುವವರೆಗೆ ಅಥವಾ 5ವರ್ಷಗಳ ಅವಧಿಗೆ ಇದರಲ್ಲಿ ಯಾವುದು ಮುನ್ನವೋ, ಪತಿ ಅಥವಾ ಪತ್ನಿ/ಮಕ್ಕಳು/ಪೆÇೀಷಕರಿಗೆ ಮಾಸಿಕ ಕಂತಲ್ಲಿ ಪಾವತಿಸಲಾಗುವುದು' ಎಂದು ಅವರು ತಿಳಿಸಿದ್ದಾರೆ.
`ಮರಣ ಹೊಂದಿದ ದಿನಾಂಕದಂದು 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದಂತ ಮೃತಪಟ್ಟ ಉದ್ಯೋಗಿಗಳ ಪತಿ ಅಥವಾ ಪತ್ನಿಯು ಭಾರತ್ ಎಲೆಕ್ಟ್ರಾನಿಕ್ಸ್ ನಿವೃತ್ತ ಉದ್ಯೋಗಿಗಳ ವಂತಿಗೆ ಆರೋಗ್ಯ ಯೋಜನೆ(ಬಿ ಇಆರ್ ಇಸಿ ಎಚ್ ಎಸ್)ಯ ವ್ಯಾಪ್ತಿಯಲ್ಲಿ ಒಳಪಡುತ್ತಾರೆ. ಘೋಷಿತ ಅವಲಂಬಿತ ಪೋಷಕರು ಮತ್ತು/ಅಥವಾ ಮಕ್ಕಳು 5ಲಕ್ಷ ರೂ.ಗಳು ಪ್ರತಿ ವರ್ಷಕ್ಕೆ 5ವರ್ಷಗಳ ಅವಧಿಗೆ ಒಳ ರೋಗಿ ಚಿಕಿತ್ಸೆಯನ್ನು ಪಡೆಯಲು ವೈದ್ಯಕೀಯ ವಿಮೆ ಪಡೆದುಕೊಳ್ಳಬಹುದಾಗಿದೆ. ಉದ್ಯೋಗಿಯ ಮರಣ ಹೊಂದಿದ ದಿನಾಂಕದಿಂದ ನಿವೃತ್ತರಾಗುವವರೆಗೆ ಅಥವಾ 5ವರ್ಷಗಳ ಅವಧಿಗೆ ಇದರಲ್ಲಿ ಯಾವುದು ಮುನ್ನವೋ ಅದು' ಎಂದು ಅವರು ವಿವರ ನೀಡಿದ್ದಾರೆ.
`ಒಂದು ವೇಳೆ ಮೃತಪಟ್ಟ ಉದ್ಯೋಗಿಗಳು 10 ವರ್ಷಗಳ ಸೇವೆ ಸಲ್ಲಿಸದೆ ಇದ್ದ ಪಕ್ಷದಲ್ಲಿ ಪತಿ ಅಥವಾ ಪತ್ನಿ, ಅವಲಂಬಿತ ಪೋಷಕರು ಮತ್ತು ಮಕ್ಕಳು 8ಲಕ್ಷ ರೂ.ಗಳು ಪ್ರತಿ ವರ್ಷಕ್ಕೆ 5 ವರ್ಷಗಳ ಅವಧಿಗೆ ವೈದ್ಯಕೀಯ ವಿಮೆ ವ್ಯಾಪ್ತಿಗಾಗಿ ಕೋರಿಕೆ ಸಲ್ಲಿಸಬಹುದಾಗಿದೆ. ಉದ್ಯೋಗಿಯ ಮರಣ ಹೊಂದಿದ ದಿನಾಂಕದಿಂದ ನಿವೃತ್ತವಾಗುವವರೆಗೆ ಅಥವಾ 5 ವರ್ಷಗಳ ಅವಧಿಗೆ ಇದರಲ್ಲಿ ಯಾವುದು ಮುನ್ನವೋ ಅದು.
ಈ ಯೋಜನೆಯು ಮೃತ ಉದ್ಯೋಗಿಗಳ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪದವಿವರೆಗೂ ವಿದ್ಯಾಭ್ಯಾಸ ಪಡೆಯುವುದಕ್ಕಾಗಿ ವಾರ್ಷಿಕ 25ಸಾವಿರ ರೂ.ನಿಂದ 40 ಸಾವಿರ ರೂ.ಗಳ ವರೆಗೆ ಪ್ರತಿ ಮಗುವಿಗೆ ವಿದ್ಯಾಭ್ಯಾಸ ಶುಲ್ಕವನ್ನು ಮರುಪಾವತಿಯ ಅವಕಾಶವನ್ನು ಕಲ್ಪಿಸಿದೆ. ವೃತ್ತಿಪರ ಅಧ್ಯಯನಗಳಾದ ಬಿಇ/ಬಿಟೆಕ್/ಎಂಬಿಬಿಎಸ್ ಇತ್ಯಾದಿಗಳಿಗೆ ಒಂದು ಮಗುವಿಗೆ ವಾರ್ಷಿಕ 1ಲಕ್ಷ ರೂ.ನಂತೆ ಪಾವತಿಸಲಾಗುವುದು. ವಿಕಲಚೇತನ ಮಕ್ಕಳಿಗೆ ಅವರ ವಿದ್ಯಾಭ್ಯಾಸದ ಅವಧಿಯಲ್ಲಿ ವರ್ಷಕ್ಕೆ 25 ಸಾವಿರ ರೂ.ನೀಡಲಾಗುವುದು. ಬಿಇಎಲ್ ಸಂಸ್ಥೆಯಲ್ಲಿ ಓದುತ್ತಿರುವ ಮೃತ ಉದ್ಯೋಗಿಗಳ ಮಕ್ಕಳಿಗೆ ಪದವಿ ತನಕ ಶುಲ್ಕ ವಿನಾಯಿತಿ ನೀಡಲಾಗುವುದು.
ಅಲ್ಲದೆ, ಮೃತ ಉದ್ಯೋಗಿಗಳ ಪತಿ/ ಪತ್ನಿ ಹಾಗೂ ಮಕ್ಕಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ ವಿಕಾಸ ಪಠ್ಯ ಕ್ರಮಗಳಿಗೆ 50 ಸಾವಿರ ರೂ.ಮೊಬಲಗನ್ನು ಮರು ಪಾವತಿಸಲಾಗುವುದು. ಮೃತ ಉದ್ಯೋಗಿಗಳ ಕುಟುಂಬವು ಒಂದು ವರ್ಷದ ಅವಧಿಗೆ ಕಂಪೆನಿಯ ಕ್ವಾರ್ಟರ್ಸ್‍ನಲ್ಲಿ ವಾಸ ಮಾಡಲು ಅನುಮತಿಸಲಾಗಿದೆ ಎಂದು ಶಿವಕುಮಾರನ್ ಕೆ.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





