ಕೋರ್ಟ್ ತಡೆಯಾಜ್ಞೆಯಿಂದ ಬೆಂಗಳೂರು ಸುತ್ತ ಕಾಮಗಾರಿ ಸ್ಥಗಿತ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಬಾಗಲಕೋಟೆ, ಜು.5: ಪರಿಸರವಾದಿಗಳ ಹೆಸರಿನಲ್ಲಿ ಹಲವರು ಅನಗತ್ಯ ತೊಂದರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಸುತ್ತಲೂ 2 ಕೋಟಿ ರೂ. ಮೊತ್ತದ ರಸ್ತೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿವೆ ಹಾಗೂ ಕಾಮಗಾರಿ ಅನುಷ್ಠಾನಕ್ಕೆ ಮೊದಲೇ ಮರ ಕಡಿಯುತ್ತಾರೆ ಎಂದು ಕೆಲವರು ಕೋರ್ಟ್‍ನಿಂದ ತಡೆಯಾಜ್ಞೆ ತರುತ್ತಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಸೋಮವಾರ ಬಾಗಲಕೋಟೆ ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಹೊಸ ರಸ್ತೆಗಳು ನಿರ್ಮಾಣವಾಗದೇ ಬೆಂಗಳೂರಿನ ಜನರು ವಿಪರೀತ ವಾಹನ ದಟ್ಟಣೆಯಿಂದ ಕಷ್ಟದ ಜೀವನ ನಡೆಸಬೇಕಾಗಿದೆ ಎಂದು ಹೇಳಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ವಾರ್ಷಿಕ 50 ಲಕ್ಷ ಮೊತ್ತದ ರೇಷ್ಮೆ ಉತ್ಪಾದನೆ ಮಾಡುವುದಿಲ್ಲ. ಆದರೆ ಆ ಇಲಾಖೆಯ ಅಧಿಕಾರಿ –ಸಿಬ್ಬಂದಿಗಳಿಗೆ ವೇತನಕ್ಕೆಂದೇ 3 ಕೋಟಿ ಖರ್ಚು ಮಾಡಲಾಗುತ್ತಿದೆ. ಕೆಲಸ ಇಲ್ಲದೇ ಖಾಲಿ ಕುಳಿತು ರಾಜಕಾರಣ ಮಾಡುತ್ತಿದ್ದಾರೆ. ಅವರನ್ನು ಬೇರೆ ಇಲಾಖೆಗಳಿಗೆ ನಿಯೋಜನೆ ಮಾಡಿ ಎಂದು ಗೋವಿಂದ ಕಾರಜೋಳ ಅವರು ಡಿಸಿಗೆ ಸೂಚಿಸಿದರು. ಆ ಎರಡೂ ಇಲಾಖೆಗಳನ್ನು ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸಲು ಸಿಎಂಗೆ ಮನವಿ ಮಾಡುವೆ ಎಂದರು.





