‘ವಿನಾಶಕಾರಿ..’ ಸ್ಟಾನ್ ಸ್ವಾಮಿ ನಿಧನದ ಕುರಿತು ಇಯು, ವಿಶ್ವಸಂಸ್ಥೆ ಮಾನವ ಹಕ್ಕುಗಳ ಪ್ರತಿನಿಧಿಗಳ ಪ್ರತಿಕ್ರಿಯೆ

ಹೊಸದಿಲ್ಲಿ,ಜು.5: ಫಾ.ಸ್ಟಾನ್ ಸ್ವಾಮಿ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ನಾಯಕರು,ಬುದ್ಧಿಜೀವಿಗಳು ಮತ್ತು ಇತರ ಹೋರಾಟಗಾರರಿಂದ ಸಂದೇಶಗಳ ಮಹಾಪೂರವೇ ಹರಿಯುತ್ತಿದೆ.
‘ಭಾರತದಿಂದ ಬಂದಿರುವ ಸುದ್ದಿಯು ವಿನಾಶಕಾರಿಯಾಗಿದೆ. ಮಾನವ ಹಕ್ಕುಗಳ ಹೀರಾಟಗಾರ ಮತ್ತು ಕ್ರೈಸ್ತ ಧರ್ಮಗುರು ಫಾ.ಸ್ಟಾನ್ ಸ್ವಾಮಿ ಅವರು ಭಯೋತ್ಪಾದನೆಯ ಸುಳ್ಳು ಆರೋಪದಲ್ಲಿ ಬಂಧಿಸಲ್ಪಟ್ಟ ಒಂಭತ್ತು ತಿಂಗಳುಗಳ ನಂತರ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಮಾನವ ಹಕ್ಕು ಹೋರಾಟಗಾರರನ್ನು ಜೈಲಿಗೆ ತಳ್ಳುವುದು ಅಕ್ಷಮ್ಯ ಅಪರಾಧವಾಗಿದೆ ’ಎಂದು ಟ್ವೀಟಿಸಿರುವ ಮಾನವ ಹಕ್ಕು ಹೋರಾಟಗಾರರಿಗಾಗಿ ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಮೇರಿ ಲಾಲರ್ ಅವರು ತನ್ನ ಕಾರ್ಯದ ಬಗ್ಗೆ ಸ್ವಾಮಿ ವಿವರಿಸಿದ್ದ ಯೂ ಟ್ಯೂಬ್ ವಿಡಿಯೋದ ಲಿಂಕ್ ಅನ್ನು ಲಗತ್ತಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್ನಲ್ಲಿ ಎನ್ಐಎ ಅಧಿಕಾರಿಗಳು ಸ್ವಾಮಿಯವರನ್ನು ಬಂಧಿಸುವ ಮುನ್ನ ಈ ವೀಡಿಯೊ ಚಿತ್ರೀಕರಣಗೊಂಡಿತ್ತು.
ಲಾಲರ್ ಟ್ವೀಟ್ ಅನ್ನು ಮರುಟ್ವೀಟಿಸಿರುವ ಮಾನವ ಹಕ್ಕುಗಳಿಗಾಗಿ ಐರೋಪ್ಯ ಒಕ್ಕೂಟ (ಐಯು)ದ ವಿಶೇಷ ಪ್ರತಿನಿಧಿ ಇಮೊನ್ ಗಿಲ್ಮೋರ್ ಅವರು,‘ಫ.ಸ್ಟಾನ್ ಸ್ವಾಮಿಯವರ ನಿಧನದ ಸುದ್ದಿ ನನಗೆ ದುಃಖವನ್ನುಂಟು ಮಾಡಿದೆ.ಅವರು ಆದಿವಾಸಿಗಳ ಹಕ್ಕುಗಳ ಪರ ಹೋರಾಟಗಾರರಾಗಿದ್ದರು. ಕಳೆದ ಒಂಭತ್ತು ತಿಂಗಳುಗಳಿಂದಲೂ ಅವರು ಬಂಧನದಲ್ಲಿದ್ದರು. ಇಯು ಪದೇಪದೇ ಅಧಿಕಾರಿಗಳೊಂದಿಗೆ ಅವರ ಪ್ರಕರಣವನ್ನು ಎತ್ತುತ್ತಲೇ ಇತ್ತು ಎಂದು ಹೇಳಿದ್ದಾರೆ.
ಸ್ವಾಮಿ ನಿಧನಕ್ಕೆ ಕೇಂದ್ರವೇ ಹೊಣೆಗಾರನಾಗಿದೆ ಎಂದು ಹೇಳಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು,ಸ್ಟಾನ್ ಸ್ವಾಮಿಯವರ ಸಾವಿಗೆ ಕಾರಣವಾದ ಸಂಪೂರ್ಣ ಉದಾಸೀನ ಮತ್ತು ಸಕಾಲದಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸದ್ದಕ್ಕೆ ಕೇಂದ್ರ ಸರಕಾರವು ಉತ್ತರಿಸಬೇಕಿದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕರಾದ ಪ್ರಿಯಾಂಗಾ ಗಾಂಧಿ ವಾದ್ರಾ ಮತ್ತು ಶಶಿ ತರೂರ್ ಹಾಗೂ ಟಿ.ಎಂ ಕೃಷ್ಣ ಅವರಂತಹ ಕಲಾವಿದರು ಸ್ವಾಮಿ ನಿಧನಕ್ಕೆ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.







