ಪುತ್ತೂರು ಹನಿಟ್ರ್ಯಾಪ್ ಪ್ರಕರಣ: ಬಂಧಿತ ಮೂವರು ಆರೋಪಿಗಳಿಗೆ ಮಧ್ಯಂತರ ಜಾಮೀನು

ಪುತ್ತೂರು: ಹನಿಟ್ರ್ಯಾಪ್‌ಗೊಳಗಾಗಿ 30 ಲಕ್ಷ ರೂ.ಕಳೆದುಕೊಂಡಿರುವುದಾಗಿ ನೆಟ್ಟಣಿಗೆ ಮುಡ್ನೂರಿನ ಯುವಕನೋರ್ವ ನೀಡಿದ್ದ ದೂರಿನಡಿ ಪ್ರಕರಣ ದಾಖಲಿಸಿಕೊಂಡಿದ್ದ ಸಂಪ್ಯ ಪೊಲೀಸರಿಂದ ಬಂಧಿತ ಮೂವರು ಆರೋಪಿಗಳಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ನೆಟ್ಟಣಿಗೆಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಅಬ್ದುಲ್ ನಾಸಿರ್(25ವ.)ಎಂಬವರು ನೀಡಿದ್ದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೊಟ್ಯಾಡಿ ಕಟ್ಟೆಪುಣಿ ಮನೆ ನಿವಾಸಿ ಮುಹಮ್ಮದ್ ಶಾಫಿ ಯಾನೆ ಶಾಫಿ(34), ಸವಣೂರು ಗ್ರಾಮದ ಅತ್ತಿಕೆರೆ ನಿವಾಸಿ ಮುಹಮ್ಮದ್ ಅಝರುದ್ದೀನ್ ಯಾನೆ ಅಝರ್(30) ಮತ್ತು ಸವಣೂರು ಗ್ರಾಮದ ಮಾಂತೂರು ಅಂಬೇಡ್ಕರ್ ಭವನದ ಬಳಿಯ ನಿವಾಸಿ ನಝೀರ್ ಎಂ(38) ಎಂಬವರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ರೂ. 7.5 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ರೂ.5 ಲಕ್ಷ ಮೌಲ್ಯದ ಮಾರುತಿ ಬ್ರಿಝಾ ಕಾರು, ರೂ.1 ಲಕ್ಷ ಮೌಲ್ಯದ ಆಟೋ ರಿಕ್ಷಾ ಮತ್ತು ಆರೋಪಿಗಳ ಬಳಿಯಿದ್ದ 3 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಬಂಧಿತ ಆರೋಪಿಗಳನ್ನು ಮಂಗಳೂರು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದೆ. ಆರೋಪಿಗಳ ಪರ ವಕೀಲರಾದ ಕುಂಬ್ರ ದುರ್ಗಾಪ್ರಸಾದ್ ರೈ, ಸಾಲ್ಮರ ನೂರುದ್ದೀನ್ ಮತ್ತು ಅಬೂಬಕ್ಕರ್ ಸಿದ್ದೀಕ್ ಮಂಗಳೂರು ವಾದಿಸಿದ್ದರು.
ಪ್ರಕರಣದ ಓರ್ವ ಅರೋಪಿಯಾಗಿದ್ದ ಬಂಟ್ವಾಳ ಮೂಲದ ತನಿಷಾರಾಜ್ ಎಂಬಾಕೆಯನ್ನು ಆರಂಭದಲ್ಲಿಯೇ ಪೊಲೀಸರು ಬಂಧಿಸಿದ್ದು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.





