ಎತ್ತಿನಹೊಳೆ ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಕೇಂದ್ರ ಸಚಿವರಿಗೆ ಡಾ. ಸುಧಾಕರ್ ಮನವಿ

ಬೆಂಗಳೂರು/ಹೊಸದಿಲ್ಲಿ, ಜು. 6: `ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗ ಸಹಿತ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ `ಎತ್ತಿನಹೊಳೆ ಯೋಜನೆ'ಗೆ ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಬೇಕು' ಎಂದು ಕೋರಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಸಲ್ಲಿಸಿದ್ದರು.
ಮಂಗಳವಾರ ದಿಲ್ಲಿಯಲ್ಲಿ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ ಸುಧಾಕರ್, `ರಾಜ್ಯದ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳ ಕುರಿತಂತೆ ಮನವಿ ಸಲ್ಲಿಸಿದರು. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರೆ ಆ ಭಾಗದ ಜನರಿಗೆ ಅನುಕೂಲವಾಗಲಿದೆ' ಎಂದು ಕೋರಿದರು.
`ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೆರೆಗಳಲ್ಲಿ ಹೂಳೆತ್ತಲು ವಿಶೇಷ ಯೋಜನೆ ರೂಪಿಸಬೇಕು. ಕೃಷ್ಣಾ ನದಿ ನೀರನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಕರ್ನಾಟಕದ ಗಡಿ ಜಿಲ್ಲೆಗಳಿಗೆ ವಿಸ್ತರಿಸಲು ಸಹಕರಿಸಬೇಕು. ಅಲ್ಲದೆ, ರಾಜ್ಯದ ನೀರಾವರಿ ಯೋಜನೆಗಳಿಗೆ ಅಗತ್ಯ ನೆರವು ನೀಡಬೇಕು' ಎಂದು ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ಸಚಿವ ಸುಧಾಕರ್ ಸಮಾಲೋಚನೆ ನಡೆಸಿದರು.





