ಬೆಂಗಳೂರು: ಪದವಿ, ಇಂಜಿನಿಯರಿಂಗ್ ಪರೀಕ್ಷೆ ರದ್ದಿಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಚಳವಳಿ
ಬೆಂಗಳೂರು, ಜು.6: ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು(1, 3, 5ನೆ ಸೆಮಿಸ್ಟರ್) ನಡೆಸಬಾರದೆಂದು ಒತ್ತಾಯಿಸಿ ಎಐಡಿಎಸ್‍ಒ ನೇತೃತ್ವದಲ್ಲಿ ಬೆಂಗಳೂರು ನಗರಾದ್ಯಂತ ವಿದ್ಯಾರ್ಥಿಗಳು ಸಹಿ ಸಂಗ್ರಹ ಚಳವಳಿ ನಡೆಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್‍ಒ, ಈ ಹಿಂದಿನ(1, 3 ಹಾಗೂ 5) ಸೆಮಿಸ್ಟರ್ ಪಾಠಗಳು ಕೋವಿಡ್ ಲಾಕ್‍ಡೌನ್‍ನಿಂದಾಗಿ ನಡೆಯಲೇ ಇಲ್ಲ. ಆದರೂ ಪರೀಕ್ಷೆ ನಡೆಸಲು ಮುಂದಾಗಿರುವುದು ಯಾರ ಹಿತಾಸಕ್ತಿಗಾಗಿ, ಒಂದು ವೇಳೆ ಪರೀಕ್ಷೆ ನಡೆದರೆ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಿಫಲರಾಗುತ್ತಾರೆ. ಈ ಬಗ್ಗೆ ರಾಜ್ಯ ಸರಕಾರ ಪರಿಶೀಲನೆ ನಡೆಸಲಿ ಎಂದು ಆಗ್ರಹಿಸಿದೆ.
ಈಗಾಗಲೇ ಪರೀಕ್ಷೆ ರದ್ದು ಪಡಿಸುವಂತೆ ಕಾಲೇಜಿನ ಪ್ರಾಂಶುಪಾಲರು, ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಉನ್ನತ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಲು ತಯಾರಿ ಮಾಡಿಕೊಳ್ಳುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಪರೀಕ್ಷೆ ರದ್ದು ಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿ ಸಹಿ ಸಂಗ್ರಹ ಚಳವಳಿ ನಡೆಸಿದ್ದೇವೆ. ರಾಜ್ಯ ಸರಕಾರ ವಿದ್ಯಾರ್ಥಿಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





