ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ; 2023ರ ಚುನಾವಣೆ ಹೊತ್ತಿಗೆ ಆಯೋಗದ ಹೊಸ ಕಚೇರಿ ಕಾರ್ಯಾರಂಭ
ಬೆಂಗಳೂರು, ಜು. 6: ರಾಜ್ಯದಲ್ಲಿ ಲೋಕಸಭೆ, ವಿಧಾನಸಭೆ, ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಚುನಾವಣಾ ಆಯೋಗಕ್ಕೆ ಸುಸಜ್ಜಿತ ಕಟ್ಟಡವೇ ಇಲ್ಲ. ಹೀಗಾಗಿ ಚುನಾವಣಾ ಆಯೋಗದ ನೂತನ ಕಟ್ಟಡ ನಿರ್ಮಾಣಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಆನ್‍ಲೈನ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಇಲ್ಲಿನ ಶೇಷಾದ್ರಿ ರಸ್ತೆಯಲ್ಲಿನ ರಾಜ್ಯ ಚುನಾವಣಾ ಆಯೋಗದ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣಕ್ಕೆ ರಾಜ್ಯಪಾಲರು ಚಾಲನೆ ನೀಡಿದರು. ಅಲ್ಲದೆ, ಇದೇ ವೇಳೆ ಉಡುಪಿ, ಉತ್ತರ ಕನ್ನಡ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಸಂಗ್ರಹಿಸಲು ನಿರ್ಮಿಸಿರುವ ಉಗ್ರಾಣಗಳನ್ನು ಉದ್ಘಾಟಿಸಿದರು.
ಆ ಬಳಿಕ ಮಾತನಾಡಿದ ರಾಜ್ಯಪಾಲ ವಜೂಭಾಯಿ ವಾಲಾ ಅವರು, `ರಾಜ್ಯ ಚುನಾವಣಾ ಆಯೋಗವು ಇವಿಎಂ ಮತ್ತು ವಿವಿಪ್ಯಾಟ್‍ಗಳ ದಾಸ್ತಾನಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವುದು ಉತ್ತಮ. ಜೊತೆಗೆ ಇವಿಎಂಗಳ ಸುರಕ್ಷತೆಗೆ ಆಸ್ಥೆ ವಹಿಸಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್‍ಗಳ ಸಂಗ್ರಹಣೆಗೆ ವ್ಯವಸ್ಥೆ ಕಲ್ಪಿಸುತ್ತಿರುವುದು ಒಳ್ಳೆಯ ಬೆಳವಣಿಗೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಶೇಷಾದ್ರಿ ರಸ್ತೆಯಲ್ಲಿ ಆಯೋಗದ ನೂತನ ಕಚೇರಿಯನ್ನು ಒಟ್ಟು 13.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿದ್ದು, 2022ರ ಡಿಸೆಂಬರ್ ವೇಳೆಗೆ ನೂತನ ಕಚೇರಿ ಕಾಮಗಾರಿ ಪೂರ್ಣಗೊಳ್ಳಲಿದೆ. 2023ರ ವಿಧಾನಸಭೆ ಚುನಾವಣೆ ವೇಳೆ ನೂತನ ಕಚೇರಿ ಕಾರ್ಯಾರಂಭ ಮಾಡುವ ಸಾಧ್ಯತೆಗಳಿವೆ. ಇವಿಎಂ ಮತ್ತು ವಿವಿಪ್ಯಾಟ್‍ಗಳು ಚುನಾವಣೆಗೆ ಅವಿಭಾಜ್ಯ ಅಂಗ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಇವಿಎಂಗಳ ಸಂಗ್ರಹಕ್ಕೆ ಉಗ್ರಾಣವನ್ನು ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಸ್ಥಾಪಿಸಲು ಮುಂದಾಗಿದ್ದು, 123 ಕೋಟಿ ರೂ.ವೆಚ್ಚದಲ್ಲಿ ಉಗ್ರಾಣ ನಿರ್ಮಿಸಲು ಸರಕಾರ ಕ್ರಮ ವಹಿಸಿದೆ ಎಂದು ತಿಳಿಸಲಾಗಿದೆ.
ವಿವಿಪ್ಯಾಟ್ ಮತ್ತು ಇವಿಎಂಗಳನ್ನು ಶಿಕ್ಷಣ ಇಲಾಖೆ ಸಹಿತ ವಿವಿಧ ಕಚೇರಿಗಳಲ್ಲಿ ಸಂಗ್ರಹಿಸಿಡಲಾಗುತ್ತಿದೆ. ಈಗಾಗಲೇ ಗದಗ, ಬೆಂಗಳೂರು ಗ್ರಾಮಾಂತರ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉಗ್ರಾಣ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಉಳಿದ ಜಿಲ್ಲೆಗಳಲ್ಲಿಯೂ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, 2021ರ ಕೊನೆಯ ವೇಳೆಗೆ ಎಲ್ಲ ಜಿಲ್ಲೆಗಳಲ್ಲಿಯೂ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದು ಆಯೋಗದ ಪ್ರಕಟನೆ ತಿಳಿಸಿದೆ.





