"ಅದು ಇನ್ನೂ ಮುಗಿದಿಲ್ಲ": ಆತುರದಲ್ಲಿ ಕೊರೋನ ನಿರ್ಬಂಧ ಸಡಿಲಿಕೆ ವಿರುದ್ಧ ವಿಶ್ವಸಂಸ್ಥೆ ಎಚ್ಚರಿಕೆ

ವಿಶ್ವಸಂಸ್ಥೆ, ಜು.6: ಕೊರೋನ ಸೋಂಕಿನ ನಿಯಂತ್ರಣ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿಬರ್ಂಧಗಳನ್ನು ಆತುರದಿಂದ ಸಡಿಲಗೊಳಿಸುವುದರ ವಿರುದ್ಧ ತೀವ್ರ ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಇದಕ್ಕೆ ಭಾರೀ ಬೆಲೆ ತೆರಬೇಕಾದೀತು ಎಂದಿದೆ. ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಆರೋಗ್ಯ ಘಟಕದ ಸಲಹೆಗಾರ ಮೈಕ್ ರಿಯಾನ್, ಸೋಂಕಿನ ಮತ್ತೊಂದು ಅಲೆ ಶೀಘ್ರ ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಸಿದರು.
ಅಮೆರಿಕದ ದೇಶಗಳಲ್ಲೇ ಈಗ ವಾರದಲ್ಲಿ ಸುಮಾರು 1 ಮಿಲಿಯನ್ ಪ್ರಕರಣ ದಾಖಲಾಗುತ್ತಿದೆ. ಯುರೋಪ್ನಲ್ಲಿ ವಾರಕ್ಕೆ ಅರ್ಧಮಿಲಿಯ ಪ್ರಕರಣವಿದೆ. ಇದರರ್ಥ ಸೋಂಕು ಇನ್ನೂ ಮುಗಿದಿಲ್ಲ. ವಿಶ್ವದ ಹಲವೆಡೆ ಸೋಂಕಿನ ಆರಂಭ ಈಗಷ್ಟೇ ಪ್ರಾರಂಭವಾಗಿದೆ ಎಂಬುದನ್ನು ಮರೆಯಬಾರದು ಎಂದವರು ಹೇಳಿದ್ದಾರೆ.
ಎಪ್ರಿಲ್ ನಲ್ಲಿ ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ರೂಪಾಂತರಿತ ಸೋಂಕು ಸುಮಾರು 100 ದೇಶಗಳಿಗೆ ಕ್ಷಿಪ್ರವಾಗಿ ಹರಡಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಎಚ್ಚರಿಕೆ ನೀಡಿದೆ. ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ಸೋಂಕು ಪ್ರಕರಣಗಳಲ್ಲಿ 90%ಕ್ಕೂ ಅಧಿಕ ಮತ್ತು ಅಮೆರಿಕದಲ್ಲಿ ಪತ್ತೆಯಾಗಿರುವ ಹೊಸ ಪ್ರಕರಣಗಳಲ್ಲಿ 30%ಕ್ಕೂ ಅಧಿಕ ಪ್ರಕರಣ ಡೆಲ್ಟಾ ಸೋಂಕಿಗೆ ಸಂಬಂಧಿಸಿದ್ದಾಗಿದೆ.