ಸ್ಟ್ಯಾನ್ ಸ್ವಾಮಿ ನಿಧನದಿಂದ ದು:ಖ, ಆತಂಕವಾಗಿದೆ: ವಿಶ್ವಸಂಸ್ಥೆ ಕಳವಳ

ಹೊಸದಿಲ್ಲಿ,ಜುಲೈ 6: 84 ವರ್ಷ ವಯಸ್ಸಿನ ಮಾನವಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಅವರ ನಿಧನದಿಂದ ತನಗೆ ದು:ಖ ಹಾಗೂ ಆತಂಕವುಂಟಾಗಿದೆಯೆಂದು ವಿಶ್ವಸಂಸ್ಥೆ ಮಂಗಳವಾರ ತಿಳಿಸಿದೆ. ಅಭಿವ್ಯಕ್ತಿ ಸ್ವಾತಂತ್ರ, ಶಾಂತಿಯುತವಾಗಿ ಸಭೆ ಸೇರುವ ಹಾಗೂ ಸಂಘಟಿತವಾಗುವ ಹಕ್ಕುಗಳನ್ನು ಚಲಾಯಿಸಿದ್ದಕ್ಕಾಗಿ ಯಾರನ್ನೂ ಕೂಡಾ ಬಂಧಿಸಬಾರದು ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯುಕ್ತ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಕೋವಿಡ್19 ಹಾವಳಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಸಮರ್ಪಕವಾದ ಕಾನೂನಾತ್ಮಕ ಆಧಾರವಿಲ್ಲದೆ ಬಂಧಿತನಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಎಲ್ಲಾ ದೇಶಗಳು ಬಿಡುಗಡೆಗೊಳಿಸುವುದು ತುರ್ತು ಅಗತ್ಯವಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.
ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿ ಕಠೋರವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯಡಿ ಕಳೆದ ವರ್ಷ ಬಂಧಿತರಾಗಿದ್ದ ಸ್ಟಾನ್ ಸ್ವಾಮಿ ಅವರಿಗೆ ಜಾಮೀನು ದೊರೆತಿರಲಿಲ್ಲ. ಮುಂಬೈಯ ತಲೋಜಾ ಸೆಂಟ್ರಲ್ ಜೈಲಿನಲ್ಲಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಜಾಮೀನು ಕೋರಿ ಅವರು ಹಲವಾರು ಬಾರಿ ಅರ್ಜಿಗಳನ್ನು ಸಲ್ಲಿಸಿದರೂ, ಅವೆಲ್ಲವೂ ತಿರಸ್ಕೃತಗೊಂಡಿದ್ದವು.ಸೋಮವಾರ ಅವರು ಮುಂಬೈಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಸ್ಟಾನ್ ಸ್ವಾಮಿ ನಿಧನ ವ್ಯರ್ಥವಾಗಲಾರದು: ಕೆಥೋಲಿಕ್ ಮಹಾಸಭಾ
ಅನಾರೋಗ್ಯದ ಹೊರತಾಗಿಯೂ ಜಾಮೀನು ದೊರೆಯದೆ ಸೋಮವಾರ ನಿಧನರಾದ ಬುಡಕಟ್ಟು ಹಕ್ಕುಗಳ ಹೋರಾಟಗಾರ, ಕ್ರೈಸ್ತ ಧರ್ಮಗುರು ಸ್ಟಾನ್ಸ್ವಾಮಿ ಅವರ ನಿಧನದ ಹಿನ್ನೆಲೆಯಲ್ಲಿ ಬಾಂಬೆ ಕೆಥೋಲಿಕ್ ಸಭಾದ ನೇತೃತ್ವದಲ್ಲಿ ಮುಂಬೈನಲ್ಲಿ ನೂರಾರು ಜನರು ಸೋಮವಾರ ಪ್ರತಿಭಟನೆ ನಡೆಸಿದರು. 84 ವರ್ಷದ ಸ್ಟ್ಯಾನ್ ಸ್ವಾಮಿ ಅವರ ಕಸ್ಟಡಿ ಸಾವು ವ್ಯರ್ಥವಾಗಲಾರದು ಎಂದು ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.
ಪ್ರಕರಣವನ್ನು ಸುಪ್ರೀಂಕೋರ್ಟ್ ಪರಿಗಣನೆಗೆ ತೆಗೆದುಕೊಂಡು ತ್ವರಿತ ವಿಚಾರಣೆಯಿಲ್ಲದೆ ಜೈಲಿನಲ್ಲಿ ರುವ ಎಲ್ಗಾರ್ ಪರಿಷದ್ ಪ್ರಕರಣದ ಇತರ ಆರೋಪಿಗಳಿಗೆ ನ್ಯಾಯ ದೊರೆಯುವವರೆಗೆ ಪ್ರತಿಭಟನೆ ಮುಂದುವರಿಯಲಿದೆಯೆಂದು ಅವರು ಹೇಳಿದ್ದಾರೆ.
ಬಾಂಬೆ ಕೆಥೋಲಿಕ್ಸಬಾದ ಅಧ್ಯಕ್ಷ ರಾಫೆಲ್ ಡಿಸೋಝಾ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿ, ಇದು ಯಾವುದೇ ಧರ್ಮದ ಕುರಿತಾಗಿ ಅಲ್ಲ. ನಾವೆಲ್ಲವೂ ಮಾನವಜೀವಿಗಳು. ಈ ಘಟನೆಯು ಸುಪ್ರೀಂಕೋರ್ಟ್ನ ಕಣ್ಣನ್ನು ತೆರೆಸುವುದೆಂದು ನಾವು ಆಶಿಸುತ್ತೇವೆ ಎಂದು ಹೇಳಿದರು. ಅಮಾಯಕರು ಜೈಲಿನಲ್ಲಿ ಕೊಳೆಯುವುದನ್ನು ತಡೆಯಬೇಕೆಂಬುದೇ ನಾನು ಭಾರತದ ಮುಖ್ಯ ನ್ಯಾಯಮೂರ್ತಿಯವರ ಮುಂದಿಡುವ ಏಕೈಕ ಬೇಡಿಕೆಯಾಗಿದೆ’’ ಎಂದವರು ಹೇಳಿದರು.
ಸುಧಾ ಭಾರದ್ವಜ್ ಸಹಿತ ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಇತರರಿಗೂ ತಕ್ಷಣವೇ ಜಾಮೀನು ನೀಡುವಂತೆ ಅವರು ಆಗ್ರಹಿಸಿದರು.
ಸ್ಟ್ಯಾನ್ ಸ್ವಾಮಿ ಅಂತ್ಯಕ್ರಿಯೆ
ಸ್ಟ್ಯಾನ್ ಸ್ವಾಮಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ಮಂಗಳವಾರ ಸೈಂಟ್ ಪೀಟರ್ಸ್ ಚರ್ಚ್ ನ ಸ್ಮಶಾನದಲ್ಲಿ ನೆರವೇರಿತು ಹಾಗೂ ಅವರ ಸ್ಮರಣಾರ್ಥ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮ ನೆರವೇರಿತು. ಕೋವಿಡ್19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಕೇವಲ 20 ಮಂದಿ ಕ್ರೈಸ್ತ ಧರ್ಮಗುರುಗಳು ಮಾತ್ರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.
ಚರ್ಚ್ ನ ಹೊರಗಡೆ, ಪ್ರತಿಭಟನಕಾರರು ಬಾಂಬೆ ಕೆಥೋಲಿಕ್ ಸಭಾವು ಸ್ಟಾನ್ ಸ್ವಾಮಿ ಅವರ ಪೋಸ್ಟರ್ಗಳನ್ನು ಹಿಡಿದು ಮತ್ತು ಮೊಂಬತ್ತಿಗಳನ್ನು ಬೆಳಗಿ,ಮಾನವಹಕ್ಕು ಹೋರಾಟಗಾರನ ಸಾವಿನ ಘಟನೆಯನ್ನು ಪ್ರತಿಭಟಿಸಿದರು. ‘‘ ಶಾಂತಿಯಿಂದ ವಿಶ್ರಮಿಸಿ ಸ್ಟಾನ್. ನಾವು ವಿಫಲರಾಗಿದ್ದೇವೆ. ನಾವು ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದ್ದೇವೆ’’ ಎಂಬಿತ್ಯಾದಿ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಅವರು ಹಿಡಿದಿದ್ದರು







