ಬಿಜೆಪಿಯೊಂದಿಗೆ ಶಿವಸೇನೆ ಮರು ಮೈತ್ರಿ ಕುರಿತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರತಿಕ್ರಿಯೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಜೆಪಿಯೊಂದಿಗೆ ತಮ್ಮ ಪಕ್ಷವು ಮರು ಮೈತ್ರಿ ಮಾಡಿಕೊಳ್ಳುವ ಕುರಿತ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಪತ್ರಕರ್ತರಿಗೆ ಉತ್ತರಿಸಿದ ಅವರು "ನಾನು ಇನ್ನೂ ಅಜಿತ್ ಪವಾರ್ ಹಾಗೂ ಬಾಲಾಸಾಹೇಬ್ ಥೋರತ್ ಅವರೊಂದಿಗೆ ಕುಳಿತ್ತಿದ್ದೇನೆ. ನಾನು ಎಲ್ಲಿಗೂ ಹೋಗುತ್ತಿಲ್ಲ. ಹೌದು, ನಾನು ನಿಮ್ಮೊಂದಿಗೆ ಮಾತನಾಡಿದ ನಂತರ ಬಿಜೆಪಿಯನ್ನು ಭೇಟಿಯಾಗಲಿದ್ದೇನೆ" ಎಂದು ಅವರು ತಮಾಷೆಯಾಗಿ ಹೇಳಿದರು.
ಶಿವಸೇನೆ ಪಕ್ಷದ ಸಂಸದ ಸಂಜಯ್ ರಾವತ್ ಅವರು ಬಿಜೆಪಿ-ಶಿವಸೇನೆ ಸಂಬಂಧವನ್ನು ಅಮೀರ್ ಖಾನ್ ಹಾಗೂ ಕಿರಣ್ ರಾವ್ ಅವರೊಂದಿಗೆ ಹೋಲಿಸಿದ್ದರು. ಬಿಜೆಪಿಯ ದೇವೇಂದ್ರ ಫಡ್ನವೀಸ್ ಶಿವಸೇನೆ "ಎಂದಿಗೂ" "ಶತ್ರು" ಅಲ್ಲ ಎಂದು ಘೋಷಿಸಿದ ಕೆಲ ದಿನಗಳ ನಂತರ ಠಾಕ್ರೆ ಅವರ ಈ ಹೇಳಿಕೆ ಬಂದಿದೆ.
ರಾಜ್ಯ ವಿಧಾನಸಭೆಯ ಎರಡು ದಿನಗಳ ಮುಂಗಾರು ಅಧಿವೇಶನ ಮುಗಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಠಾಕ್ರೆ, ''ಅಧಿವೇಶನದಲ್ಲಿ ಬಿಜೆಪಿಯ ವರ್ತನೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ'' ಎಂದು ಹೇಳಿದರು.





