ಕಾರಾಗೃಹದಲ್ಲಿರುವ ಹೋರಾಟಗಾರರ ಬಿಡುಗಡೆಗೆ ಆಗ್ರಹಿಸಿ ಪ್ರತಿಪಕ್ಷದ ನಾಯಕರಿಂದ ರಾಷ್ಟ್ರಪತಿಗೆ ಪತ್ರ

ಮುಂಬೈ, ಜು. 6: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಕಾರಾಗೃಹದಲ್ಲಿರುವ ಎಲ್ಲಾ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್ಸಿಪಿ ವರಿಷ್ಠ ಶರದ್ ಪವಾರ್, ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡ, ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ವಿಪಕ್ಷದ ಹಿರಿಯ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಅವರ ಕಸ್ಟಡಿ ಸಾವು ಸಂಭವಿಸಿದ ಒಂದು ದಿನದ ಬಳಿಕ ಈ ನಾಯಕರು ರಾಷ್ಟ್ರಪತಿ ಅವರಿಗೆ ಈ ಪತ್ರ ಬರೆದಿದ್ದಾರೆ.
ಅವರ (ಸ್ಟಾನ್ ಸ್ವಾಮಿ) ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ, ಜೈಲಿನಲ್ಲಿರಿಸಿದ ಹಾಗೂ ಅಮಾನವೀಯವಾಗಿ ನಡೆಸಕೊಳ್ಳಲು ಕಾರಣವಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿಮ್ಮ ಸರಕಾರಕ್ಕೆ ನಿರ್ದೇಶನ ನೀಡಲು ರಾಷ್ಟ್ರಪತಿಯವರಾಗಿ ಕೂಡಲೇ ಮಧ್ಯಪ್ರವೇಶಿಸುವಂತೆ ನಾವು ಆಗ್ರಹಿಸುತ್ತಿದ್ದೇವೆ. ಕಾರಣರಾದವರನ್ನು ಉತ್ತರದಾಯಿಯನ್ನಾಗಿ ಮಾಡಬೇಕು.
ಭೀಮಾ ಕೋರೆಗಾವ್ ಪ್ರಕರಣದಲ್ಲಿ ಜೈಲಿನಲ್ಲಿರುವವರು ಹಾಗೂ ಇತರ ರಾಜಕೀಯ ಪ್ರೇರಿತ ಪ್ರಕರಣಗಳಲ್ಲಿ, ಯುಎಪಿಎ, ದೇಶದ್ರೋಹದಂತಹ ಕ್ರೂರ ಕಾನೂನಿನ ದುರ್ಬಳಕೆಯಿಂದ ಬಂಧಿತರಾಗಿರುವವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
‘‘ಬಂಧನದಲ್ಲಿದ್ದ ಸ್ಟಾನ್ ಸ್ವಾಮಿ ಅವರ ಸಾವಿನ ಬಗ್ಗೆ ತೀವ್ರ ಆಕ್ರೋಶ ಹಾಗೂ ದುಃಖ ವ್ಯಕ್ತಪಡಿಸುತ್ತಾ ನಾವು ನಿಮಗೆ ಈ ಪತ್ರ ಬರೆಯುತ್ತಿದ್ದೇವೆ’’ ಎಂದು ಪ್ರತಿಪಕ್ಷದ ನಾಯಕರು ಸಹಿ ಹಾಕಿದ ಈ ಪತ್ರದಲ್ಲಿ ಹೇಳಲಾಗಿದೆ. ಈ ಮೂವರು ನಾಯಕರಲ್ಲದೆ, ಎಂ.ಕೆ. ಸ್ಟಾಲಿನ್, ಹೇಮಂತ್ ಸೊರೇನ್, ಫಾರೂಕ್ ಅಬ್ದುಲ್ಲಾ, ತೇಜಸ್ವಿ ಯಾದವ್, ಡಿ. ರಾಜಾ, ಸೀತಾರಾಮ್ ಯೆಚೂರಿ ಕೂಡ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.







