ಇನ್ನೂ ಕೈಗೆ ಸಿಗದ ಪರಿಹಾರ ಹಣ
ಮಾನ್ಯರೆ,
ಕಳೆದ ಎರಡು ವರ್ಷಗಳಿಂದ ಸುರಿದ ಮಹಾಮಳೆಗೆ ರಾಜ್ಯದಲ್ಲಿ ಹಲವಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಮನೆ ಕಳೆದುಕೊಂಡು ನಿರ್ಗತಿಕವಾಗಿವೆ. ಈಗಲೂ ಎಷ್ಟೋ ಕುಟುಂಬಗಳು ನೆಲೆ ಕಂಡುಕೊಳ್ಳಲು ವಿಫಲವಾಗಿವೆ. ಸರಕಾರ ಇಂತಹ ಫಲಾನುಭವಿಗಳಿಗೆ ಮೂರು ಕಂತಿನಂತೆ 2,865.80 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದು ಅದರಲ್ಲಿ 1,643.46 ಕೋಟಿ ರೂ. ಬಿಡುಗಡೆ ಮಾಡಿ ಇನ್ನುಳಿದ 1,222.34 ಕೋಟಿ ರೂ. ಬಿಡುಗಡೆ ಮಾಡಬೇಕಿದೆ. ಮೂರು ಕಂತಿನಂತೆ ನೀಡಬೇಕಿದ್ದ ಹಣದಲ್ಲಿ ಮೊದಲ ಕಂತಿನ ಹಣ ಮಾತ್ರ ನೀಡಿ ಉಳಿದ ಕಂತಿನ ಹಣ ಬಾಕಿ ಇರಿಸಿರುವುದು ದುರದೃಷ್ಟಕರ ಸಂಗತಿ. ಈಗಾಗಲೇ ಲಾಕ್‌ಡೌನ್ ಮತ್ತು ಬೆಲೆ ಏರಿಕೆಯಿಂದ ಬಡಜನರು ಸಂಕಷ್ಟಕ್ಕೆ ಸಿಲುಕಿದ್ದರೂ ಸರಕಾರ ಮಾತ್ರ ಕೋವಿಡ್ ನೆಪದಿಂದ ಈ ಫಲಾನುಭವಿಗಳಿಗೆ ನೆರೆ ಪರಿಹಾರದ ಹಣವನ್ನು ನೀಡದೆ ಸತಾಯಿಸುತ್ತಿರುವುದು ಸರಿಯಲ್ಲ. ಎಷ್ಟೋ ಬಡಕುಟುಂಬಗಳು ಚಿಕ್ಕ ಮಕ್ಕಳು ಮತ್ತು ವೃದ್ಧ್ಧರ ಜೊತೆ ಸೂರಿಗಾಗಿ ಒದ್ದಾಡುತ್ತಿವೆ. ಆದ್ದರಿಂದ ಸರಕಾರ ಇನ್ನಿತರ ಯೋಜನೆಗಳಿಗಿಂತ ಮುಖ್ಯವಾಗಿ ನೆರೆಪೀಡಿತ ಫಲಾನುಭವಿಗಳಿಗೆ ಉಳಿದ ಕಂತಿನ ಹಣ ಸಂದಾಯ ಮಾಡಿ ಅವರ ಬಾಳಿಗೆ ಬೇಳಕು ನಿಡಲು ಮುಂದಾಗಲಿ.





