ನಾಗರೀಕತೆ ಎಂಬುದು ಸತ್ತು ಹೋಗಿದೆ. ಚರಿತ್ರೆಗಳಿಂದ ನಾವು ಏನನ್ನೂ ಕಲಿತಿಲ್ಲ: ಕೋಟಿಗಾನಹಳ್ಳಿ ರಾಮಯ್ಯ

ಕೋಲಾರ : ದಲಿತ ಕವಿ, ಸಾಹಿತಿ ಡಾ.ಸಿದ್ಧಲಿಂಗಯ್ಯ ಅವರ ನುಡಿಗಳು ಸಿಡಿಲ ಮರಿಯಂತಿದ್ದವು. ಅವರು ಮಣ್ಣಿನ ಋಣದಲ್ಲಿ ಕಣ್ಣನು ತೆರೆಯಲು ಸಾಧ್ಯವಾಗಿದ್ದರೆ ಅದರ ಆಶಯವೇ ಬೇರೆಯದ್ದಾಗುತ್ತಿತ್ತು. ಆದರೆ, ಅವರು ಹೊಸ ನುಡಿಕಟ್ಟುಗಳ ಜತೆ ಸಂವಾದಿಸಲಿಲ್ಲ. ಒಂದು ವೇಳೆ ಸಂವಾದಿಸಿದ್ದರೆ ಅವರು ಇನ್ನಷ್ಟು ವಿಸ್ತಾರಗೊಳ್ಳುತ್ತಿದ್ದರು. ಎಂದು ಎಂದು ರಂಗಭೂಮಿ ತಜ್ಞ, ನಾಟಕಕಾರ ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.
ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ದಸಂಸ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ. ಸಿದ್ಧಲಿಂಗಯ್ಯ ಅವರಿಗೆ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿದ್ಧಲಿಂಗಯ್ಯ ಅವರಿಗೆ ಕಾವ್ಯದ ಮೂಲಕ ನುಡಿನಮನ ಸಲ್ಲಿಸುವುದು ನನ್ನ ಸೌಭಾಗ್ಯವೆಂದು ಅವರ ಕುರಿತಾಗಿ ಈ ದಿನ ಬೆಳಗ್ಗೆ ಬರೆದ ಕವಿತೆಯೊಂದನ್ನು ವಾಚಿಸಿದ ಕೋಟಿಗಾನಹಳ್ಳಿ ರಾಮಯ್ಯ, ನಾವು ಹಾಡಿನ ಜತೆ ಬೆಳೆದವರು,ನುಡಿನಮನಗಳು ಚಾರಿತ್ರ್ಯಿಕ ಪ್ರತಿಫಲನಗಳು. ಸಿದ್ಧಲಿಂಗಯ್ಯ ನುಡಿ ದೀಪ ಹಚ್ಚಿದವರು. ಅವರಿಗೆ ಹೆಮ್ಮೆಯಿಂದ ವಿದಾಯ ಕೋರಬೇಕಾದುದು ಸಮುದಾಯದ ಜೀವಂತಿಕೆ, ಸನ್ನಡತೆ ಸಮುದಾಯದ ಲಕ್ಷಣ. ಆದರೆ ಈಗ ಎಲ್ಲೆಡೆ ನಡೆಯುುತ್ತಿರುವ ನುಡಿಯುತ್ತಿರುವ ನುಡಿನಮನಗಳು ಅವರ ಒಟ್ಟು ಆಶಯಗಳಿಗೆ ಗೌರವ ಸಲ್ಲಿಸಿದಂತೆ ಆಗುತ್ತಿಲ್ಲ ಎಂದು ವಿಷಾಧಿಸಿದರು.
ಇಂದು ನಾಗರೀಕತೆ ಎಂಬುದು ಸತ್ತು ಹೋಗಿದೆ. ಚರಿತ್ರೆಗಳಿಂದ ನಾವು ಏನನ್ನೂ ಕಲಿತಿಲ್ಲ ಎಂಬುದು ಅಷ್ಟೇ ಸತ್ಯ. ಚರಿತ್ರೆಯಲ್ಲಿ ರಿಜಾಯಿನರಿಸ್‍ಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ಕಾಲಘಟ್ಟದಲ್ಲಿ ಮರು ಪಯಣ ಶುರುವಾಗಬೇಕು. ಇದರ ಅರ್ಥವನ್ನು ದೊಡ್ಡ ರಿತಿಯಲ್ಲಿ ಗ್ರಹಿಸಲು ಸಾಧ್ಯವಾದರೆ ಸಿದ್ದಲಿಂಗಯ್ಯ ಅವರ ಆಶಯಗಳನ್ನು ಕಾಣಲು ಸಾಧ್ಯ ಎಂದ ಅವರು, ಸ್ಲಂ ಪ್ರದೇಶದಲ್ಲಿ ಹುಟ್ಟಿದ ಸಿದ್ಧಲಿಂಗಯ್ಯ ಅವರು ನುಡಿಯ ಮೂಲಕವೇ ಘನತೆ ಸಂಪಾದಿಸಿ ವಿವಿಧ ಕ್ಷೇತ್ರಗಳಲ್ಲಿ, ರಾಜಕೀಯವಾಗಿಯೂ ವಿಸ್ತಾರವನ್ನು ತಲುಪಿದ್ದರು. ವಿಧಾನ ಪರಿಷತ್ ಸದಸ್ಯರಾಗಿ ಸದನದಲ್ಲಿ ಧ್ವನಿ ಎತ್ತಿದ ಪರಿಣಾಮ ಜಾರಿಗೊಂಡ ಕಾರ್ಯಕ್ರಮಗಳು ಜನಮುಖಿತಯಾಗಿಯೂ ಇದ್ದವು. ಅದರೆ ಚಳುವಳಿಯ ತಾಯಿ ಬೇರಿಗೆ ಏನೂ ಮಾಡಲಿಲ್ಲ ಎನ್ನುವ ಕೊರತೆಯನ್ನು ಅವರಲ್ಲಿ ಕಂಡಿದ್ದೇನೆ. ಬೆಂಗಳೂರು ವಿವಿಯನ್ನು ಬೌದ್ಧಿಕ ಪೀಠವನ್ನಾಗಿ ವಿಮೋಚನೆಗೊಳಿಸುವ ಅವಕಾಶದಿಂದ ವಂಚಿತರಾದರು. ರಾಜಕೀಯ ಅಧಿಕಾರ ಸಿಕ್ಕಾಗ ಡಾ.ಬಿ.ಆರ್. ಅಂಬೇಡ್ಕರ್ ಏನು ಮಾಡಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಎಂದು ನುಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ದಲಿತ ಮುಖಂಡ ವೆಂಕಟಾಪು ಸತ್ಯಂ, ಜಾತಿ, ಧರ್ಮ, ಮತ ಇಲ್ಲದೆ ಬದುಕಬಹುದು. ಗಾಳಿ, ನೀರು, ಬೆಳಕು ಇಲ್ಲದೆ ಬದುಕಲು ಆಗಲ್ಲ. ಸಿದ್ಧಲಿಂಗಯ್ಯ ಅವರದ್ದು ಪುಟ್ಟ ದೇಹವಾದರೂ ಅನೇಕರನ್ನು ಎಚ್ಚರಿಸಿದೆ. ಹಾಡುಗಳು ಪ್ರಭಾವ ಬೀರಿದೆ. ಅವರನ್ನು ಗೌರವಿಸಬೇಕೇ ಹೊರತು ಪೂಜಿಸುವ ಅಗತ್ಯವಿಲ್ಲ. ದಲಿತ ಚಳುವಳಿಯನ್ನು ಬೆಳೆಸಿದವರು ನಾಡಿನ ಉದ್ದಗಲಕ್ಕೂ ಅವರ ಹಾಡುಗಳು ದಲಿತ ಹೋರಾಟಗಳಲ್ಲಿ ಪ್ರತಿಧ್ವನಿಸುತ್ತಿದೆ. ಅವರ ಸಾಹಿತ್ಯ, ವಿಮರ್ಶಾಕೃತಿ, ಕವನಗಳು ಮೌಢ್ಯಕ್ಕೆ ರಾಜಿಯಾಗದೆ, ಚಳುವಳಿಗೆ ಹಾಕಿಕೊಟ್ಟ ದಾರಿ ಚಿರಿತ್ರೆಯಲ್ಲಿ ನಿಂತುಹೋಗಿದೆ. ಅವರ ಹಾಡು, ಸಾಹಿತ್ಯ ದಲಿತ ಚಳುವಳಿಯನ್ನು ಒಳ್ಳೆಯ ರೀತಿ ಕಟ್ಟಲು ವೇದಿಕೆ ಆಗಲಿ ಎಂದು ಆಶಿಸಿದರು.
ದಸಂಸ ಮಾಜಿ ರಾಜ್ಯ ಸಂಚಾಲಕ ಎನ್. ಮುನಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬಾಗೇಪಲ್ಲಿಯ ಡಾ.ಅನಿಲ್‍ಕುಮಾರ್, ಇಸ್ರೋ ಶ್ರೀನಿವಾಸ್, ದಸಂಸ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ, ದಸಂಸ ಸಂಘಟನಾ ಸಂಚಾಲಕ ಎಚ್ ಮುನಿವೆಂಕಟಪ್ಪ, ಆದಿಮ ಬಳಗದ ಹಾ.ಮಾ ರಾಮಚಂದ್ರ, ಜಾನಪದ ಅಕಾಡಮಿ ಮಾಜಿ ಅಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್, ಪರಿಸರ ಕವಿ ಗೊಲ್ಲಹಳ್ಳಿ ಶಿವಪ್ರಸಾದ್ ಇನ್ನಿತರರು ಇದ್ದರು.







