ಜೆಇಇ ಮುಖ್ಯ ಪರೀಕ್ಷೆ: ಜುಲೈ 20ರಿಂದ ಆಗಸ್ಟ್ 2ರ ವರೆಗೆ 3,4ನೇ ಹಂತದ ಪರೀಕ್ಷೆ
ಹೊಸದಿಲ್ಲಿ, ಜು. 6: ಜೆಇಇ ಮುಖ್ಯ ಪರೀಕ್ಷೆಯ ಮೂರನೇ ಹಾಗೂ ನಾಲ್ಕನೇ ಹಂತದ ಪರೀಕ್ಷೆ ಈ ವರ್ಷ ಜುಲೈ 20ರಿಂದ ಆಗಸ್ಟ್ 2ರ ವರೆಗೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಮಂಗಳವಾರ ಘೋಷಿಸಿದ್ದಾರೆ. ಕೇಂದ್ರ ಸರಕಾರ ಜೆಇಇ ಪರೀಕ್ಷೆಯನ್ನು ಮೊದಲ ಬಾರಿಗೆ ನಾಲ್ಕು ಹಂತಗಳಲ್ಲಿ ನಡೆಸುತ್ತಿದೆ.
2021-22 ಶೈಕ್ಷಣಿಕ ಅವಧಿಯ ಮೊದಲ ಹಾಗೂ ಎರಡನೇ ಹಂತದ ಪರೀಕ್ಷೆ ಈಗಾಗಲೇ ನಡೆಸಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಕಾರಣಕ್ಕೆ ಮೂರನೇ ಹಾಗೂ ನಾಲ್ಕನೇ ಹಂತದ ಪರೀಕ್ಷೆಯನ್ನು ಇದುವರೆಗೆ ಘೋಷಿಸಿರಲಿಲ್ಲ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆನ್ಲೈನ್ ನಲ್ಲಿ ಮಾತನಾಡಿದ ಪೋಖ್ರಿಯಾಲ್, ಜೆಇಇ ಮುಖ್ಯ ಪರೀಕ್ಷೆಯ ಮೂರನೇ ಹಂತದ ಪರೀಕ್ಷೆ ಜುಲೈ 20ರಿಂದ ಜುಲೈ 25ರ ವರೆಗೆ ನಡೆಯಲಿದೆ. ನಾಲ್ಕನೇ ಹಂತ ಜುಲೈ 27ರಿಂದ ಆಗಸ್ಟ್ 2ರ ವರೆಗೆ ನಡೆಯಲಿದೆ ಎಂದಿದ್ದಾರೆ. ವಿದ್ಯಾರ್ಥಿಗಳು ಮೂರನೇ ಹಂತದ ಪರೀಕ್ಷೆಗೆ ಜುಲೈ 6ರಿಂದ ಜುಲೈ 8ರ ವರೆಗೆ ನಾಲ್ಕನೇ ಹಂತದ ಪರೀಕ್ಷೆಗೆ ಜುಲೈ 9ರಿಂದ ಜುಲೈ 12ರ ವರೆಗೆ ನೋಂದಣಿ ಮಾಡಬಹುದು ಎಂದು ಪೋಖ್ರಿಯಾಲ್ ತಿಳಿಸಿದ್ದಾರೆ.





