ಉಡುಪಿ: ಗುರುವಾರದ ಲಸಿಕೆ ಲಭ್ಯತೆ ವಿವರ
ಉಡುಪಿ, ಜು.6: ಜಿಲ್ಲೆಯಲ್ಲಿ ಗುರುವಾರದಂದು ಉಡುಪಿ ನಗರ ಪ್ರದೇಶದ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿ ಗಳು, ಆದ್ಯತಾ ಗುಂಪಿನವರು,ಆರೋಗ್ಯ ಕಾರ್ಯಕರ್ತರು, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರುಗಳಿಗೆ ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್-19 2ನೇ ಡೋಸ್ ಲಸಿಕೆ ಲಭ್ಯವಿರುತ್ತದೆ.
ನಗರದ ಜಿಲ್ಲಾ ಆಸ್ಪತ್ರೆಯ ಸೇಂಟ್ ಸಿಸಿಲಿ ಶಾಲೆಯ ಲಸಿಕಾ ಕೇಂದ್ರದಲ್ಲಿ 2ನೇ ಡೋಸ್ ಕೋವಿಶೀಲ್ಡ್ 150 ಡೋಸ್, ಕೋವ್ಯಾಕ್ಸಿನ್ 2ನೇ ಡೋಸ್ 100 ಡೋಸ್, ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜುಲೈ 15ರೊಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನ ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ 100 ಡೋಸ್ ಲಭ್ಯವಿದೆ.
ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿಗಳು, ಆರೋಗ್ಯ ಕಾರ್ಯಕರ್ತರು, ಕೇಂದ್ರ ಸರಕಾರ ಗುರುತಿ ಸಿರುವ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್-19 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು.
ಜಿಲ್ಲೆಯಲ್ಲಿ 18ರಿಂದ 44 ವರ್ಷ ವಯೋಮಿತಿಯ ಸಾರ್ವಜನಿಕರಿಗೆ ಯಾವುದೇ ಕೋವಿಡ್-19 ಲಸಿಕೆ ಲಭ್ಯವಿರುವುದಿಲ್ಲ ಹಾಗೂ 45 ವರ್ಷ ಮೇಲ್ಪಟ್ಟ ವಯೋಮಿತಿಯ ಸಾರ್ವಜನಿಕರಿಗೆ ಪ್ರಥಮ ಡೋಸ್ ಕೋವಿಡ್-19 ಲಸಿಕೆ ಲಭ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.