ನೂತನ ಸಚಿವರು ಊಟಕ್ಕೆ ಇಲ್ಲದ ಉಪ್ಪಿನಕಾಯಿ ಇದ್ದಂತೆ: ಸಿದ್ದರಾಮಯ್ಯ ಟೀಕೆ

ಬೆಂಗಳೂರು, ಜು.8: ರಾಜ್ಯದಿಂದ ಪ್ರತಿನಿಧಿಸುವ ನಾಲ್ವರು ಸಚಿವರು ಊಟಕ್ಕೆ ಇಲ್ಲದ ಉಪ್ಪಿನಕಾಯಿ ಇದ್ದಂತೆ. ಯಾವುದೇ ಉಪಯೋಗವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಗುರುವಾರ ಇಲ್ಲಿನ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ವತಿಯಿಂದ ಉಚಿತ ದಿನಸಿ ಕಿಟ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಿಂದ ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ ಸೇರಿದಂತೆ ಇದೀಗ ನಾಲ್ವರು ನೂತನ ಮಂತ್ರಿಗಳಾಗಿದ್ದಾರೆ. ಆದರೆ, ಇಷ್ಟೆಲ್ಲಾ ಬಲ ಇದ್ದರೂ, ರಾಜ್ಯಕ್ಕೆ ಅನುದಾನ ತರುವಲ್ಲಿ ವಿಫಲವಾಗಿದ್ದು, ಇವರು ಊಟಕ್ಕೆ ಇಲ್ಲದ ಉಪ್ಪಿನಕಾಯಿ ಇದ್ದಂತೆ ಎಂದು ವಾಗ್ದಾಳಿ ನಡೆಸಿದರು.
15ನೆ ಹಣಕಾಸು ಆಯೋಗ 5,495 ಕೋಟಿ ರೂ ವಿಶೇಷ ಅನುದಾನ ಕೊಡಬೇಕು. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಡೆಹಿಡಿದಿದ್ದಾರೆ. ಇದರ ಬಗ್ಗೆ ಪ್ರಶ್ನಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧೈರ್ಯವೇ ಇಲ್ಲ. ಒಂದು ವೇಳೆ ನಾನು ಮುಖ್ಯಮಂತ್ರಿ ಆಗಿದ್ದರೆ ಇಂದು ನಿರ್ಮಲಾ ಸೀತಾರಾಮನ್ ಮನೆ ಮುಂದೆಯೇ ಧರಣಿ ನಡೆಸುತ್ತಿದ್ದೆ ಎಂದು ತಿಳಿಸಿದರು.
ಯಡಿಯೂರಪ್ಪ ಹಾಗೂ ಅವರ ಮಂತ್ರಿಮಂಡಲಕ್ಕೆ ಮರ್ಯಾದೆ ಇಲ್ಲ. ಅವರ ಚರ್ಮ ದಪ್ಪ ಆಗಿದೆ. ರಾಜ್ಯದಿಂದ 25 ಸಂಸದರು ಇದ್ದಾರೆ. ಆರು ಜನ ಮಂತ್ರಿಗಳಾದರೂ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಯಾವುದೇ ಪ್ರಯೋಜನ ಇಲ್ಲ ಎಂದು ಸಿದ್ದರಾಮಯ್ಯ ನುಡಿದರು.







