ಟ್ವಿಟರ್ ಇಂಡಿಯಾ ಎಂಡಿಗೆ ನೋಟಿಸ್ ನೀಡಿದ ಕ್ರಮ ಸಮರ್ಥಿಸಿಕೊಂಡ ಉ.ಪ್ರ. ಪೊಲೀಸರು

ಬೆಂಗಳೂರು, ಜು.8: ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಕ್ರಮವನ್ನು ಉತ್ತರ ಪ್ರದೇಶ ಪೊಲೀಸರು, ಕರ್ನಾಟಕ ಹೈಕೋರ್ಟ್ ಮುಂದೆ ಸಮರ್ಥಿಸಿಕೊಂಡಿದ್ದಾರೆ.
ಹಲ್ಲೆ ಪ್ರಕರಣದ ವಿಡಿಯೊ ಅಪ್‍ಲೋಡ್ ಪ್ರಕರಣದ ಸಂಬಂಧ ವಿಚಾರಣೆಗೆ ಖುದ್ದು ಹಾಜರಾಗುವಂತೆ ಗಾಜಿಯಾಬಾದ್‍ನ ಪೊಲೀಸರು ನೋಟಿಸ್ ನೀಡಿದ್ದರು. ಅದನ್ನು ರದ್ದು ಮಾಡುವಂತೆ ಮನೀಶ್ ಮಹೇಶ್ವರಿ ಸಲ್ಲಿಸಿರುವ ಅರ್ಜಿ ಹೈಕೋರ್ಟ್ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂತು.
ಉತ್ತರ ಪ್ರದೇಶ ಪೊಲೀಸರ ಪರ ವಾದಿಸಿದ ವಕೀಲ ಪಿ.ಪ್ರಸನ್ನಕುಮಾರ್ ಅವರು, ಲಿಖಿತ ಹೇಳಿಕೆ ಸಲ್ಲಿಸಿ, ಘಟನೆ ನಡೆದಿರುವುದು ಉತ್ತರ ಪ್ರದೇಶದ ಲೋನಿ ಬಾರ್ಡರ್ ಠಾಣಾ ವ್ಯಾಪ್ತಿಯಲ್ಲಿ. ಹೀಗಾಗಿ, ದೂರು ದಾಖಲಿಸಲಾಗಿದೆ. ಜತೆಗೆ ಟ್ವಿಟರ್ ಎಂಡಿಗೆ ನೋಟಿಸ್ ನೀಡಲಾಗಿದೆ. ಅರ್ಜಿದಾರರ ಹೊಸದಿಲ್ಲಿ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗಿದೆ. ಆದರೆ, ಬೆಂಗಳೂರಿನ ನಿವಾಸಿಯಾಗಿದ್ದೇನೆಂದು ತಿಳಿಸಿ ನೋಟಿಸ್ ರದ್ದು ಕೋರಿ ಅವರು ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದು ಸರಿಯಾದ ಕ್ರಮವಲ್ಲ. ಅದನ್ನು ಪೀಠ ವಜಾ ಮಾಡಬೇಕು ಎಂದು ವಾದಿಸಿದರು.





