ಡೆಲ್ಟಾ ಸೋಂಕು ಪ್ರಕರಣ ಏರಿಕೆ: ಅಮೆರಿಕದಲ್ಲಿ ಮತ್ತೆ ಉಲ್ಬಣಗೊಳ್ಳುತ್ತಿರುವ ಸೋಂಕು ಪ್ರಕರಣ

ವಾಷಿಂಗ್ಟನ್, ಜು.8: ಲಸಿಕೀಕರಣ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿರುವ ಮತ್ತು ಹೆಚ್ಚು ಸಾಂಕ್ರಾಮಿಕವಾದ ಡೆಲ್ಟಾ ರೂಪಾಂತರಿ ಪ್ರಭೇದದ ಪ್ರಕರಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಕೋವಿಡ್ ಸೋಂಕು ಪ್ರಕರಣ ಮತ್ತೆ ಉಲ್ಬಣಗೊಳ್ಳುತ್ತಿದೆ ಎಂದು ಸರಕಾರ ಬುಧವಾರ ಬಿಡುಗಡೆಗೊಳಿಸಿರುವ ಅಂಕಿಅಂಶದ ತಿಳಿಸಿದೆ.
ಜುಲೈ 6ರವರೆಗಿನ 7 ವಾರದ ಸರಾಸರಿ ಹೊಸ ಪ್ರಕರಣಗಳಲ್ಲಿ(2 ವಾರದ ಹಿಂದಿನ ಸರಾಸರಿಗೆ ಹೋಲಿಸಿದರೆ) 21% ಏರಿಕೆಯಾಗಿದ್ದು 13,859 ಹೊಸ ಪ್ರಕರಣ ದಾಖಲಾಗಿದೆ . ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜುಲೈ 4 ವಾರಾಂತ್ಯದ ರಜೆಯಿದ್ದ ಕಾರಣ ಕೆಲವು ಪ್ರಕರಣಗಳು ದಾಖಲಾಗಿಲ್ಲದ ಕಾರಣ ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎಂದು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವ ಕೇಂದ್ರ(ಸಿಡಿಸಿ)ದ ಪ್ರಕಟಣೆ ಹೇಳಿದೆ. ಜುಲೈ 3ಕ್ಕೆ ಅಂತ್ಯಗೊಳ್ಳುವ 2 ವಾರದ ಅವಧಿಯಲ್ಲಿ ದಾಖಲಾದ ಸೋಂಕು ಪ್ರಕರಣಗಳಲ್ಲಿ ಸುಮಾರು 52% ಡೆಲ್ಟಾ ಸೋಂಕಿಗೆ ಸಂಬಂಧಿಸಿದ್ದಾಗಿದ್ದು ಇತರ ದೇಶಗಳಿಗಿಂತ ಅತ್ಯಧಿಕ ಪ್ರಮಾಣದ ಲಸಿಕೆ ಲಭ್ಯವಿದ್ದರೂ ಎಪ್ರಿಲ್ ಬಳಿಕ ಲಸಿಕೀಕರಣ ಪ್ರಕ್ರಿಯೆ ಅತ್ಯಂತ ಮಂದಗತಿಗೆ ತಿರುಗಿದ್ದು ಸಮಸ್ಯೆ ಹೆಚ್ಚಲು ಕಾರಣ ಎಂದು ಸಿಡಿಸಿ ಹೇಳಿದೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ದೇಶದಲ್ಲಿ 70% ಲಸಿಕೀಕರಣ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿಯನ್ನು ಅಧ್ಯಕ್ಷ ಬೈಡೆನ್ ಇರಿಸಿಕೊಂಡಿದ್ದರು. ಆದರೆ 67% ಪೂರ್ಣವಾಗಿದೆ. ಉತ್ತರಮಧ್ಯ ವಲಯ ಮತ್ತು ದಕ್ಷಿಣ ವಲಯದಲ್ಲಿ ಲಸಿಕೀಕರಣ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದರೆ ಹೊಸ ಸೋಂಕಿನ ಪ್ರಕರಣ ಹೆಚ್ಚು ದಾಖಲಾಗಿದೆ.
ಮಿಸ್ಸೌರಿಯ ಸ್ಪ್ರಿಂಗ್ ಫೀಲ್ಡ್ ನ ಆಸ್ಪತ್ರೆಗೆ ದಾಖಲಾಗುವ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಇಲ್ಲಿ ವೆಂಟಿಲೇಟರ್ ಕೊರತೆಯಾಗಿದೆ. ಅಮೆರಿಕದಲ್ಲಿ ಕೊರೋನ ಸೋಂಕಿನ 2 ವಿಭಿನ್ನ ಗುಣಗಳನ್ನು ಕಾಣಬಹುದು. ಲಸಿಕೆ ಪಡೆಯದ ಜನರು ಹೆಚ್ಚಿರುವ ಪ್ರದೇಶದಲ್ಲಿ ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದರೆ, ಇತರ ಭಾಗಗಳಲ್ಲಿ ಸಾಮಾನ್ಯ ಉಸಿರಾಟದ ಪ್ರಕರಣವಾಗಿದೆ. ನಾವೀಗ ಆಸ್ಪತ್ರೆಗೆ ದಾಖಲಿಸುವ ಪ್ರಕರಣಗಳ ಪ್ರಮಾಣವನ್ನು ಕಡಿಮೆಗೊಳಿಸುವ ಬಗ್ಗೆ ಗಮನ ಹರಿಸಬೇಕಿದೆ ಎಂದು ಜಾನ್ ಹಾಕಿನ್ಸ್ ಸೆಂಟರ್ ಫಾರ್ ಹೆಲ್ತ್ ಸೆಕ್ಯುರಿಟಿಯ ಅಮೇಶ್ ಅಡಲ್ಜ ಹೇಳಿದ್ದಾರೆ.







