ಅಮೆರಿಕ ಸೇನೆ ವಾಪಸಾತಿ ಪೂರ್ಣಗೊಳ್ಳುವ ಮುನ್ನವೇ ಅಪಘಾನ್ ನಗರಕ್ಕೆ ಮುತ್ತಿಗೆ ಹಾಕಿದ ತಾಲಿಬಾನ್

photo: twitter
ಕಾಬೂಲ್, ಜು.8: ಅಪಘಾನಿಸ್ತಾನದಿಂದ ಅಮೆರಿಕ ಪಡೆಗಳ ವಾಪಸಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ತಾಲಿಬಾನ್ ಪಡೆಗಳು ಬದ್ಘೀಸ್ ಪ್ರಾಂತ್ಯದ ರಾಜಧಾನಿಗೆ ಮುತ್ತಿಗೆ ಹಾಕಿವೆ ಎಂದು ವರದಿಯಾಗಿದೆ.
ಗುರುವಾರ ತಾಲಿಬಾನ್ ಪಡೆಗಳು ಮೋಟಾರು ಬೈಕ್ ನಲ್ಲಿ ಬದ್ಘೀಸ್ ಪ್ರಾಂತ್ಯದ ರಾಜಧಾನಿ ಖಲಾ-ಇ-ನಾವ್ನ ಹೊರಭಾಗದಲ್ಲಿ ಅಡ್ಡಾಡಿದರು. ಈ ಬೆದರಿಕೆಯನ್ನು ಎದುರಿಸಲು ಸರಕಾರ ತಕ್ಷಣ ನೂರಾರು ಕಮಾಂಡೋಗಳನ್ನು ಅಲ್ಲಿಗೆ ರವಾನಿಸಿದ್ದು ವಾಯುಪಡೆಯೂ ತಾಲಿಬಾನ್ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ನಗರದ 75,000 ಜನರಲ್ಲಿ ಬಹುತೇಕ ನಿವಾಸಿಗಳು ಸಮೀಪದ ಪ್ರದೇಶಕ್ಕೆ ಓಡಿಹೋಗಿದ್ದು ಉಳಿದವರು ಮನೆಯೊಳಗೇ ಉಳಿದಿದ್ದಾರೆ. ಕೆಲ ತಾಲಿಬಾನಿಗಳು ಇನ್ನೂ ನಗರದಲ್ಲೇ ಉಳಿದಿದ್ದಾರೆ. ಮೋಟಾರ್ ಬೈಕ್ನಲ್ಲಿ ನಗರದ ಬೀದಿಯಲ್ಲಿ ಸುತ್ತಾಡುವುದನ್ನು ಕಂಡಿದ್ದೇವೆ . ಅಂಗಡಿಗಳನ್ನು ಮುಚ್ಚಲಾಗಿದ್ದು ರಸ್ತೆಗಳಲ್ಲಿ ಜನಸಂಚಾರವಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳಿರುವುದಾಗಿ ವರದಿಯಾಗಿದೆ.
ಬದ್ಘೀಸ್ ಪ್ರಾಂತ್ಯದ ಎಲ್ಲಾ ಜಿಲ್ಲೆಗಳೂ ತಾಲಿಬಾನಿಗಳ ನಿಯಂತ್ರಣದಲ್ಲಿದ್ದು ಜನತೆ ಭೀತಿಗೊಂಡಿದ್ದಾರೆ. ಅಂಗಡಿ, ಸರಕಾರಿ ಕಚೇರಿಗಳು ಮುಚ್ಚಿದ್ದು ಭಾರೀ ಹೋರಾಟ ಮುಂದುವರಿದಿರುವ ವರದಿಯಾಗಿದೆ ಎಂದು ಪ್ರಾಂತೀಯ ಸಮಿತಿ ಸದಸ್ಯ ಝಿಯಾ ಗುಲ್ ಹಬೀಬಿ ಹೇಳಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ. ತಾಲಿಬಾನಿಗಳು ನಗರದಲ್ಲೇ ಉಳಿಯಲು ನಿರ್ಧರಿಸಿದರೆ, ಮಹಿಳೆಯರು ಕಾರ್ಯನಿರ್ವಹಿಸಲು ಸಮಸ್ಯೆಯಾಗಬಹುದು.
ಮಹಿಳೆಯರಿಗೆ, ವಿಶೇಷವಾಗಿ ಕಾರ್ಯಕರ್ತೆಯರಿಗೆ ಇದೊಂದು ತುರ್ತುಪರಿಸ್ಥಿತಿಯಾಗಿದೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪರಿಸಿಲಾ ಹೆರವಯ್ ಹೇಳಿದ್ದಾರೆ. ಈ ಮಧ್ಯೆ, ಬುಧವಾರ ಕೆಲಸಮಯ ತಾಲಿಬಾನ್ ಪಡೆಗಳ ವಶದಲ್ಲಿದ್ದ ಪೊಲೀಸ್ ಕೇಂದ್ರ ಕಚೇರಿ ಮತ್ತು ಗುಪ್ತಚರ ಕಚೇರಿಯಿಂದ ತಾಲಿಬಾನ್ ಪಡೆಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಸರಕಾರಿ ಮೂಲಗಳು ಹೇಳಿವೆ.
ಉತ್ತರದ ಭಾಗದಲ್ಲಿ ಬಹುತೇಕ ಪ್ರದೇಶಗಳನ್ನು ಕೈವಶ ಮಾಡಿಕೊಂಡಿರುವ ತಾಲಿಬಾನಿಗಳು, ಸರಕಾರವನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾದ ನಾಗರಿಕರನ್ನು ಅಲ್ಲಿಂದ ತೆರಳುವಂತೆ ಬಲವಂತಗೊಳಿಸುತ್ತಿದ್ದಾರೆ. ಇದು ಜನತೆ ಮುಂದಿನ ದಿನಗಳಲ್ಲಿ ಅನುಭವಿಸಬೇಕಾದ ದೌರ್ಜನ್ಯದ ಪೂರ್ವಸೂಚನೆಯಾಗಿರಬಹುದು. ಈ ದೌರ್ಜನ್ಯವನ್ನು ತಡೆಯಲು ತಾಲಿಬಾನ್ ಮುಖಂಡರು ಅಧಿಕಾರ ಹೊಂದಿದ್ದರೂ ಅವರು ಮುಂದಾಗುತ್ತಿಲ್ಲ ಎಂದು ಮಾನವಹಕ್ಕು ವೀಕ್ಷಕ ಸಂಸ್ಥೆ ಎಚ್ಆರ್ಡಬ್ಲ್ಯೂ ಸಹಾಯಕ ನಿರ್ದೇಶಕಿ ಪೆಟ್ರೀಷಿಯಾ ಗಾಸ್ಮನ್ ಹೇಳಿದ್ದಾರೆ.
ಜೈಲಿನ ಗೇಟು ತೆರೆದ ತಾಲಿಬಾನಿಗಳು
ಈ ಮಧ್ಯೆ, ಬುಧವಾರ ಬದ್ಘೀಸ್ ಪ್ರಾಂತ್ಯದ ಸಿಟಿ ಜೈಲಿಗೆ ಮುತ್ತಿಗೆ ಹಾಕಿದ ತಾಲಿಬಾನ್ ಪಡೆ, ಜೈಲಿನ ಗೇಟು ತೆರೆದು ಒಳಗಿದ್ದ ಖೈದಿಗಳನ್ನು ಬಿಡುಗಡೆಗೊಳಿಸಿದೆ. ಜೈಲು ಅಧಿಕಾರಿಗಳು ತಾಲಿಬಾನ್ ಗೆ ಶರಣಾದರು ಎಂದು ಸ್ಥಳೀಯರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ಇಲಾಖೆಯ ವಕ್ತಾರ ಫವದ್ ಅಮನ್, ಸ್ಥಳಕ್ಕೆ ಧಾವಿಸಿದ ನೂರಾರು ಕಮಾಂಡೊಗಳು ವ್ಯಾಪಕ ಕಾರ್ಯಾಚರಣೆ ನಡೆಸಿದ್ದು ತಾಲಿಬಾನಿಗಳ ವಶದಲ್ಲಿದ್ದ ಬಹುತೇಕ ಪ್ರದೇಶಗಳನ್ನು ಮರುವಶ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.







