ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿ ಬಳಿಕ ಹಿಂಪಡೆದ ಪ.ಬಂಗಾಳ ಬಿಜೆಪಿ ಸಂಸದ

ಕೋಲ್ಕತಾ, ಜು.8: ಪಕ್ಷದ ನಾಯಕತ್ವವನ್ನು ಟೀಕಿಸಿ ಹುದ್ದೆಗೆ ರಾಜೀನಾಮೆ ನೀಡಿದ್ದ ಪಶ್ಚಿಮ ಬಂಗಾಳ ಬಿಜೆಪಿ ಯುವಮೋರ್ಛಾ ಅಧ್ಯಕ್ಷ, ಸಂಸದ ಸೌಮಿತ್ರಾ ಖಾನ್, ಬಳಿಕ ಬಿಜೆಪಿಯ ಉನ್ನತ ಮುಖಂಡರ ಸೂಚನೆಯಂತೆ ರಾಜೀನಾಮೆ ಹಿಂಪಡೆದಿರುವುದಾಗಿ ಹೇಳಿದ್ದಾರೆ. ಅಮಿತ್ ಶಾ, ಬಿಎಲ್ ಸಂತೋಷ್ ಮತ್ತು ತೇಜಸ್ವಿ ಸೂರ್ಯರ ಸಲಹೆಯಂತೆ ರಾಜೀನಾಮೆ ವಾಪಾಸು ಪಡೆದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಪ.ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹಾಗೂ ಬಿಜೆಪಿ ಮುಖಂಡ ಸುವೇಂದು ಅಧಿಕಾರಿಯನ್ನು ಟೀಕಿಸಿದ್ದ ಖಾನ್ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಪಕ್ಷದ ಸಾಧನೆಯ ಶ್ರೇಯವನ್ನು ಅಧಿಕಾರಿ ತಾನೊಬ್ಬನೇ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ವಿಧಾನಸಭೆಯಲ್ಲಿವಿಪಕ್ಷ ನಾಯಕನಾಗಿರುವ ಅವರು ಅಲ್ಪಸಂಖ್ಯಾತರ ಬಗ್ಗೆಯೂ ಗಮನಿಸಬೇಕು. ಅವರು ಪಕ್ಷದ ಹೈಕಮಾಂಡ್ನ ದಾರಿತಪ್ಪಿಸುತ್ತಿದ್ದಾರೆ. ಬಂಗಾಳದಲ್ಲಿ ಬಿಜೆಪಿಯ ಉನ್ನತ ನಾಯಕ ತಾನೊಬ್ಬನೇ ಎಂದವರು ಭಾವಿಸಿದ್ದಾರೆ ಎಂದು ಸುವೇಂದು ಅಧಿಕಾರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಘೋಷ್ ಗೆ ರಾಜ್ಯದಲ್ಲಿ ನಡೆಯುವ ವಿದ್ಯಮಾನಗಳ ಸಂಪೂರ್ಣ ಅರಿವಿಲ್ಲ. ಇತರರು ಮಾಹಿತಿ ನೀಡಿದರೂ ಅದನ್ನು ಕೇಳುವಷ್ಟು ವ್ಯವಧಾನವಿಲ್ಲ ಎಂದು ಟೀಕಿಸಿದ್ದರು. ಒಂದು ಅಥವಾ 2 ಜಿಲ್ಲೆಗಳ ಮುಖಂಡರು ರಾಜ್ಯದಲ್ಲಿ ಪಕ್ಷದ ಮೇಲೆ ನಿಯಂತ್ರಣ ಹೊಂದಿದ್ದಾರೆ. ಚುನಾವಣೆಗೂ ಮುನ್ನ ಟಿಎಂಸಿಯಿಂದ ಸಂಶಯಾಸ್ಪದ ವಿಶ್ವಾಸಾರ್ಹತೆಯ ಕೆಲವು ಮುಖಂಡರನ್ನು
ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದ್ದು ಇವರಲ್ಲಿ ಕೆಲವರು ಹೀನಾಯ ಸೋಲುಂಡಿದ್ದಾರೆ ಎಂದವರು ಟೀಕಿಸಿದ್ದಾರೆ. ಈ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಸುವೇಂದು ಅಧಿಕಾರಿ, ಅವರು ನನ್ನ ಕಿರಿಯ ಸೋದರನಿದ್ದಂತೆ. ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ದಿಲ್ಲಿಯಲ್ಲಿರುವ ಅವರ ಮನೆಗೆ ಹೋಗಿ ಅವರೊಂದಿಗೆ ಭೋಜನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಖಾನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ರಾಜ್ಯಘಟಕದ ಅಧ್ಯಕ್ಷರಿಗೆ ಬಿಟ್ಟ ವಿಷಯ ಎಂದವರು ಇದೇ ಸಂದರ್ಭ ಹೇಳಿದರು. ಬಿಜೆಪಿಯಲ್ಲಿ ಹೊಸ ಮತ್ತು ಹಳೆಯ ಮುಖಂಡರ ನಡುವಿರುವ ದ್ವೇಷವನ್ನು ಈ ಪ್ರಕರಣ ಹೊರಗೆಡವಿದೆ. ಟಿಎಂಸಿಯಲ್ಲಿ ಅಧಿಕಾರ ಅನುಭವಿಸಿ ಬಿಜೆಪಿಗೆ ಹಾರಿದ ಸುವೇಂದು, ಈಗ ಬಿಜೆಪಿಯ ಮುಖಂಡರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಣಾಲ್ ಘೋಷ್ ಪ್ರತಿಕ್ರಿಯಿಸಿದ್ದಾರೆ.







