ಆಕ್ಸಿಜನ್ ದುರಂತ ಬೇರೆ ಜಿಲ್ಲೆಯಲ್ಲಿ ನಡೆದಿದ್ದರೆ ಸರಕಾರವೇ ಉರುಳುತ್ತಿತ್ತು: ಮಾಜಿ ಸಚಿವ ಚೆಲುವರಾಯಸ್ವಾಮಿ

ಚಾಮರಾಜನಗರ, ಜು.8: ಅಂತರ್ ರಾಜ್ಯಗಳ ಗಡಿ ಚಾಮರಾಜನಗರದಲ್ಲಿ ಮೇ ತಿಂಗಳ 2 ರಂದು ರಾತ್ರಿ ನಡೆದ ಕೋವಿಡ್ ಆಸ್ಪತ್ರೆಯ ಆಕ್ಸಿಜನ್ ದುರಂತವೇನಾದರೂ ಬೇರೆ ಜಿಲ್ಲೆಯಲ್ಲಿ ಸಂಭವಿಸಿದ್ದರೆ ರಾಜ್ಯ ಸರಕಾರ ಪತನವಾಗುತ್ತಿತ್ತು. ಆಕ್ಸಿಜನ್ ದುರಂತದಲ್ಲಿ ಮಡಿದ 36 ಮಂದಿಯ ಕುಟುಂಬಕ್ಕೆ ಸರಕಾರ ಸಾಂತ್ವನ ಹೇಳಲಿಲ್ಲ. ದುರ್ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೂ ಸರಕಾರ ಪತನವಾದ ಉದಾಹರಣೆ ಇದೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಚಾಮರಾಜನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಯೋಜಿಸಲಾಗಿದ್ದ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಕ್ಸಿಜನ್ ದುರಂತ ಏನಾದರೂ ಚಾಮರಾಜನಗರ ಬಿಟ್ಟು ಬೇರೆ ಜಿಲ್ಲೆಯಲ್ಲಿ ಆಗಿದ್ದರೆ ಸರಕಾರವೇ ಉರುಳುತ್ತಿತ್ತು. ಓರ್ವ ಸತ್ತಾಗಲೇ ಸರಕಾರಗಳು ಬಿದ್ದ ಉದಾಹರಣೆ ಇದೆ. 36 ಮಂದಿ ಸತ್ತರೂ ಸರಕಾರ ಸಾಂತ್ವನ ಹೇಳಿಲ್ಲವಲ್ಲ. ನಾವು ಹೋರಾಟ ಮಾಡಿದ ಬಳಿಕ ಕೋವಿಡ್ ನಿಂದ ಮೃತಪಟ್ಟವರಿಗೆ ಒಂದು ಲಕ್ಷ ರೂ. ಪರಿಹಾರ ಕೊಡಲು ಸರಕಾರ ಘೋಷಿಸಿತು ಎಂದರು.
ಒಂದೆಡೆ ಕೊರೋನದಿಂದ ಆರ್ಥಿಕ ಸಂಕಷ್ಟ, ಬೀದಿಗೆ ಬಿದ್ದ ಜೀವನದ ನಡುವೆ ಬೆಲೆ ಏರಿಕೆಯು ಜನ ಸಾಮಾನ್ಯನನ್ನು ಹೈರಣಾಗಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಆಡಳಿತ ನಡೆಸಲು ನೈತಿಕತೆಯೇ ಇಲ್ಲ. ದರ ಏರಿಕೆಯ ಬಗ್ಗೆ ಇದುವರೆಗೂ ಪ್ರಧಾನಿ ಮಾತನಾಡಿಲ್ಲ. ಇದು ಅವರಿಗೆ ವಿಚಾರವೇ ಅಲ್ಲದಾಗಿದೆ. ಜನರು ಎಚ್ಚರಗೊಳ್ಳುವ ತನಕ ಈ ಸಮಸ್ಯೆಗಳಿಗೆ ಮುಕ್ತಿ ಇಲ್ಲ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಯುಪಿಎ ಸರಕಾರದ ಅಧಿಕಾರದ ಅವಧಿಗಿಂತ ಈಗಲೇ ಪ್ರತಿ ಬ್ಯಾರೆಲ್ ಗೆ ಕಡಿಮೆ ಬೆಲೆ ಇದ್ದರೂ ಹತ್ತಾರು ಪಟ್ಟು ಹೆಚ್ಚು ದುಡ್ಡು ಕೊಟ್ಟು ಇಂಧನ ಖರೀದಿಸಬೇಕಿದೆ ಎಂದು ಕಿಡಿಕಾರಿದರು.
ಇಂಧನ ಬೆಲೆ ಹಾಗೂ ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಇಂದು ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ಹೊರಹಾಕಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಡಳಿತ ಭವನದರೆಗೆ ಸೈಕಲ್ ಜಾಥಾ ನಡೆಸಿದರು.







