"ಆರೋಗ್ಯಕರ ಪ್ರಜಾಪ್ರಭುತ್ವವು ಮಾನವ ಹಕ್ಕುಗಳ ಹೋರಾಟಗಾರ ಪಾತ್ರವನ್ನು ಗೌರವಿಸಬೇಕು"
ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಸಾವಿನ ಕುರಿತು ಅಮೆರಿಕ

ಹೊಸದಿಲ್ಲಿ, ಜು. 8: ಬುಡಕಟ್ಟು ಹಕ್ಕುಗಳ ಹೋರಾಟಗಾರ ಹಾಗೂ ಜೆಸ್ಯುಟ್ ಪಾದ್ರಿ ಸ್ಟ್ಯಾನ್ ಸ್ವಾಮಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಅಮೆರಿಕದ ವಿದೇಶಾಂಗ ಸಚಿವಾಲಯದ ಅಧೀನದಲ್ಲಿರುವ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರದ ಕಾರ್ಯಾಲಯ, ‘‘ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳ ಹೋರಾಟಗಾರರ ಪ್ರಮುಖ ಪಾತ್ರಕ್ಕೆ ಗೌರವ ನೀಡಬೇಕು’’ ಎಂದು ಭಾರತವನ್ನು ಆಗ್ರಹಿಸಿದೆ.
‘‘ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಭಾರತದ ಕಸ್ಟಡಿಯಲ್ಲಿ ಸಾವನ್ನಪ್ಪಿದ ಜೆಸ್ಯೂಟ್ ಪಾದ್ರಿ ಹಾಗೂ ಬುಡಕಟ್ಟು ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಅವರ ಸಾವಿನಿಂದ ನಾವು ದುಃಖಿತರಾಗಿದ್ದೇವೆ. ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳ ಹೋರಾಟಗಾರರ ಪ್ರಧಾನ ಪಾತ್ರದ ಬಗ್ಗೆ ಗೌರವ ನೀಡುವಂತೆ ನಾವು ಎಲ್ಲ ಸರಕಾರಗಳಿಗೆ ಕರೆ ನೀಡಿದ್ದೇವೆ’’ ಎಂದು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರದ ಕಾರ್ಯಾಲಯ ಗುರುವಾರ ಟ್ವೀಟ್ ಮಾಡಿದೆ.
ಅಮೆರಿಕದ ವಿದೇಶಾಂಗ ನೀತಿಯ ಪ್ರಮುಖ ಉದ್ದೇಶವಾಗಿರುವ ಧಾರ್ಮಿಕ ಸ್ವಾತಂತ್ರಕ್ಕೆ ವಿಶ್ವಾತ್ಮಕ ಗೌರವ ನೀಡುವುದನ್ನು ಧಾರ್ಮಿಕ ಸ್ವಾತಂತ್ರದ ಅಂತಾರಾಷ್ಟ್ರೀಯ ಕಾರ್ಯಾಲಯ ಪ್ರೇರೇಪಿಸುತ್ತದೆ. ಅದು ಜಗತ್ತಿನಾದ್ಯಂತ ಧಾರ್ಮಿಕ ಪ್ರೇರಿತ ನಿಂದನೆಗಳು, ಕಿರುಕುಳ ಹಾಗೂ ಅಸಮಾನತೆಯನ್ನು ನಿರಂತರವಾಗಿ ಪರಿವೀಕ್ಷಣೆ ನಡೆಸುತ್ತದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಶಿಫಾರಸು, ಅಭಿವೃದ್ಧಿ ಹಾಗೂ ಅನುಷ್ಠಾನವನ್ನು ಕೂಡ ಅದು ಮಾಡುತ್ತದೆ. ಸ್ವಾಮಿ ಅವರನ್ನು ಭಯೋತ್ಪಾದನೆಯ ಸುಳ್ಳು ಆರೋಪದಲ್ಲಿ ಕಾರಾಗೃಹದಲ್ಲಿ ಇರಿಸಲಾಯಿತು. ಈ ವಿಷಯದ ಬಗ್ಗೆ ಯುರೋಪ್ ಒಕ್ಕೂಟ ಭಾರತ ಸರಕಾರಕ್ಕೆ ಮತ್ತೆ ಮತ್ತೆ ತಿಳಿಸಿತ್ತು ಎಂದು ಯುರೋಪ್ ಒಕ್ಕೂಟದ ಮಾನವ ಹಕ್ಕುಗಳ ವಿಶೇಷ ಪ್ರತಿನಿಧಿ ಈಮನ್ ಗಿಲ್ಮೋರೆ ಹಾಗೂ ಮಾನವ ಹಕ್ಕು ಪ್ರತಿಪಾದಕರ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಮೇರಿ ಲಾವ್ಲರ್ ಅವರು ಹೇಳಿಕೆ ನೀಡಿದ ಬಳಿಕ ಈ ಹೇಳಿಕೆ ಬಿಡುಗಡೆಯಾಗಿದೆ.
ಆದರೆ, ಈ ಹೇಳಿಕೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆ. ತನ್ನ ಎಲ್ಲಾ ಪ್ರಜೆಗಳ ಮಾನವ ಹಕ್ಕುಗಳ ರಕ್ಷಣೆ ಹಾಗೂ ಅದರ ಪ್ರಚಾರಕ್ಕೆ ಭಾರತ ಬದ್ಧವಾಗಿದೆ. ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಮಾನವ ಹಕ್ಕುಗಳ ಆಯೋಗಗಳು ಹಾಗೂ ಸ್ವತಂತ್ರ ನ್ಯಾಯಾಂಗ ದೇಶದ ಪ್ರಜಾಪ್ರಭುತ್ವ ರಾಜಕೀಯಕ್ಕೆ ಪೂರಕವಾಗಿದೆ ಎಂದು ಅದು ಹೇಳಿದೆ.







