ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿಗೆ ಬೌಲಿಂಗ್ ಮಾಡಿದ್ದ ಅಸ್ಸಾಂನ ಸ್ಪಿನ್ನರ್ ಈಗ ರಸ್ತೆ ಬದಿ ಚಹಾ ಮಾರಾಟಗಾರ !

ಫೋಟೊ ಕೃಪೆ: India Today
ಹೊಸದಿಲ್ಲಿ, ಜು. 8: ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಂತೆ ಈ ಹಿಂದೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಅಸ್ಸಾಂನ ಎಡಗೈ ಸ್ಪಿನ್ನರ್ ಪ್ರಕಾಶ್ ಭಗತ್ ಈಗ ತನ್ನ ಬಡ ಕುಟುಂಬವನ್ನು ಸಲಹಲು ರಸ್ತೆ ಬದಿಯಲ್ಲಿ ಸ್ಟಾಲ್ ಹಾಕಿ ಚಹಾ ಹಾಗೂ ದಾಲ್ಪುರಿ ಮಾರಾಟ ಮಾಡುತ್ತಿದ್ದಾರೆ.
17 ವರ್ಷದ ಕೆಳಗಿನ ವಿಜಯ್ ಮರ್ಚಂಟ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಬಿಹಾರದ ವಿರುದ್ಧ ಆಡಿದ್ದ ಭಗತ್ ಅವರು ಹ್ಯಾಟ್ರಿಕ್ ವಿಕೆಟ್ ಸೇರಿದಂತೆ 7 ವಿಕೆಟ್ ಪಡೆದುಕೊಂಡಿದ್ದರು. ಅವರು ರಣಜಿ ಟ್ರೋಫಿಯಲ್ಲಿ ಅಸ್ಸಾಂ ತಂಡವನ್ನು ಪ್ರತಿನಿಧಿಸಿದ್ದರು. 34ರ ಹರೆಯದ ಭಗತ್ ಅವರು ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿರುವ ಸಿಲ್ಚಾರ್ ಪಟ್ಟಣದ ಇಟಖೋಲಾ ಪ್ರದೇಶದ ನಿವಾಸಿ. ಈಗ ಅವರು ಪ್ರತಿದಿನ ರಸ್ತೆ ಬದಿಯ ಸ್ಟಾಲ್ನಲ್ಲಿ ಕುಳಿತು ತನ್ನ ತಾಯಿಯೊಂದಿಗೆ ಚಹಾ ಹಾಗೂ ಫಾಸ್ಟ್ ಫುಡ್ ಮಾರಾಟ ಮಾಡುತ್ತಿದ್ದಾರೆ.
‘‘2009-10, 2010-11ರ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ನಾನು ಅಸ್ಸಾಂ ತಂಡದಲ್ಲಿ ಆಡಿದ್ದೆ. 2007ರಲ್ಲಿ ಅಂತರ್ ರಾಜ್ಯ ಕ್ರಿಕೆಟ್ ಚಾಂಪಿಯನ್ಶಿಪ್ ನಲ್ಲಿ ಸಿಲ್ಚಾರ್ ಜಿಲ್ಲಾ ತಂಡ ಚಾಂಪಿಯನ್ ಆಗಿತ್ತು. ನಾನು ಆ ತಂಡದ ನಾಯಕನಾಗಿದ್ದೆ’’ ಎಂದು ಅವರು ಹೇಳಿದ್ದಾರೆ. 65ರ ಹರೆಯದ ತಂದೆ ಹೃದಯಾಘಾತದಲ್ಲಿ ಮೃತಪಟ್ಟ ಬಳಿಕ ಭಗತ್ ಅವರು 2011ರಲ್ಲಿ ಕ್ರಿಕೆಟ್ ತ್ಯಜಿಸಿದ್ದರು.
‘‘ತಂದೆ ಮೃತಪಟ್ಟ ಬಳಿಕ, ಕುಟುಂಬದ ಎಲ್ಲ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು. ನನಗೆ ಪೂರ್ಣವಾಗಿ ಕ್ರಿಕೆಟ್ ನ ಹಿಂದೆ ಹೋಗಲು ಸಾಧ್ಯವಾಗಲಿಲ್ಲ. ಕ್ರಿಕೆಟ್ ನ ದೈನಂದಿನ ಅಭ್ಯಾಸಕ್ಕೆ ನನಗೆ ಸಮಯ ನೀಡಲು ಸಾಧ್ಯವಾಗಲಿಲ್ಲ. ನನ್ನ ಕುಟುಂಬವನ್ನು ನೋಡಿಕೊಳ್ಳುವುದು ಕಷ್ಟವಾಯಿತು. ಇದೇ ಸಂದರ್ಭ ನಾನು ಕ್ರಿಕೆಟ್ ಕೂಡ ಆಡಬೇಕಾಗಿತ್ತು. ಅಲ್ಲಿಂದ ನನ್ನ ಕುಸಿತ ಆರಂಭವಾಯಿತು’’ ಎಂದು ಅವರು ಹೇಳಿದ್ದಾರೆ.
‘‘ನಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈ ಹಿಂದೆ ನಾನು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ 10 ಸಾವಿರ ರೂಪಾಯಿಯಿಂದ 12 ಸಾವಿರ ರೂಪಾಯಿ ಗಳಿಸುತ್ತಿದ್ದೆ. ಇದು ನನ್ನ ಕುಟುಂಬವನ್ನು ಸಲಹಲು ಸಾಕಾಗುತ್ತಿತ್ತು. ಆದರೆ, ಕೋವಿಡ್ ಲಾಕ್ಡೌನ್ ಸಂದರ್ಭ ನಾನು ಕೆಲಸ ಕಳೆದುಕೊಂಡೆ. ನಾನು ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ನನ್ನ ತಂದೆ ನಡೆಸುತ್ತಿದ್ದ ಸ್ಟಾಲ್ ಅನ್ನು ಈಗ ನಾನು ನಡೆಸುತ್ತಿದ್ದೇನೆ’’ ಎಂದು ಭಗತ್ ಹೇಳಿದ್ದಾರೆ.







