ಜು.10ರಿಂದ 'ಶಿಕ್ಷಕರು-ರಾಷ್ಟ್ರ ನಿರ್ಮಾಣಕ್ಕಾಗಿ' ಅಭಿಯಾನ
ಬೆಂಗಳೂರು, ಜು.8: ಶಿಕ್ಷಕ ವರ್ಗದ ಪರಿಸ್ಥಿತಿ ಮತ್ತು ಅವರ ಸಮಸ್ಯೆಗಳ ಕಡೆ ಗಮನ ಸೆಳೆಯುವ ಸಲುವಾಗಿ ನಾಳೆಯಿಂದ(ಜು.10) ಏಳು ದಿನಗಳವರೆಗೂ ಶಿಕ್ಷಕರು-ರಾಷ್ಟ್ರ ನಿರ್ಮಾಣಕ್ಕಾಗಿ ಘೋಷ ವಾಕ್ಯದೊಂದಿಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ತಿಳಿಸಿದೆ.
ಗುರುವಾರ ಈ ಕುರಿತು ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ, ಈ ಅಭಿಯಾನ ರಾಜ್ಯದೆಲ್ಲೆಡೆ ನಡೆಯಲಿದ್ದು, ಜು.10 ರಂದು ರಾತ್ರಿ 8 ಗಂಟೆಗೆ ವಿಡಿಯೊ ಸಂವಾದ ಮೂಲಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಜಮಾತೆ-ಇ-ಇಸ್ಲಾಮಿ ಹಿಂದ್ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳ್ಗಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಷ್ಟ್ರೀಯ ಉಪಾಧ್ಯಕ್ಷ ಎಂ.ಅಹ್ಮದ್ ಕೊತ್ವಾಲ್ ಅಧ್ಯಕ್ಷತೆ ವಹಿಲಿದ್ದಾರೆ ಎಂದು ಅವರು ತಿಳಿಸಿದರು.
ವಿವಿಧ ವಿಷಯಗಳ ಕುರಿತು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ, ನ್ಯೂ ಶಮ್ಸ್ ಶಾಲೆಯ ಪ್ರಾಂಶುಪಾಲ ಲಿಯಾಖತ್ ಅಲಿ, ಕೇಂದ್ರಿಯ ಶಿಕ್ಷಣ ಕೇಂದ್ರದ ನಿರ್ದೆಶಕ ಸೈಯ್ಯದ್ ತನ್ವೀರ್ ಅಹ್ಮದ್, ಮೌಲಾನ ಆಝಾದ್ ನ್ಯಾಶನಲ್ ಉರ್ದು ವಿಶ್ವವಿದ್ಯಾಲಯದ ರಿಜಿಸ್ಟಾರ್ ಸಿದ್ದೀಖ್ ಮುಹಮ್ಮದ್, ಎ.ಜೆ.ಅಕಾಡೆಮಿಯ ನಿರ್ದೇಶಕ ಮುಹಮ್ಮದ್ ಅಬ್ದುಲ್ಲಾ ಝಾವಿದ್, ಅಝೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದ ಪ್ರೊ. ಮುಜಾಹಿದುಲ್ ಇಸ್ಲಾಮ್ ಸೇರಿದಂತೆ ಪ್ರಮುಖರು ಮಾತನಾಡಲಿದ್ದಾರೆ ಎಂದು ಹೇಳಿದರು.
ಜು.17 ರಂದು ನಡೆಯುವ ಅಭಿಯಾನದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಶಿಯೇಶನ್ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.







