ಪ್ಯಾರಿಸ್ ನಲ್ಲಿ ಸರಕಾರದ ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿ ಭಾರತಕ್ಕೆ ಯಾವುದೇ ಆದೇಶ ಬಂದಿಲ್ಲ: ಕೇಂದ್ರ ಸ್ಪಷ್ಟನೆ
ಹೊಸದಿಲ್ಲಿ, ಜು.8: ಪ್ಯಾರಿಸ್ನಲ್ಲಿ ಭಾರತ ಸರಕಾರದ ಆಸ್ತಿಯನ್ನು ಸ್ಕಾಟ್ಲ್ಯಾಂಡ್ನ ತೈಲ ಕಂಪೆನಿ ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಫ್ರಾನ್ಸ್ನ ನ್ಯಾಯಾಲಯದಿಂದ ಯಾವುದೇ ನೋಟಿಸ್, ಆದೇಶ ಅಥವಾ ಮಾಹಿತಿ ಬಂದಿಲ್ಲ ಎಂದು ಕೇಂದ್ರ ಸರಕಾರ ಗುರುವಾರ ಹೇಳಿದೆ. ತೆರಿಗೆ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಫ್ರಾನ್ಸ್ ನ ನ್ಯಾಯಾಲಯ ಫ್ರಾನ್ಸ್ನಲ್ಲಿರುವ ಭಾರತ ಸರಕಾರದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ‘ದಿ ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿತ್ತು.
ಭಾರತ ಸರಕಾರ ಸುಮಾರು 12,695 ಕೋಟಿ ರೂ. ಮೊತ್ತ ಪಾವತಿಸಬೇಕು ಎಂದು ಸ್ಕಾಟ್ಲ್ಯಾಂಡ್ನ ಕೈರ್ನ್ ಎನರ್ಜಿ ಸಂಸ್ಥೆ ಫ್ರಾನ್ಸ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ನ್ಯಾಯಸಮ್ಮತ ಮತ್ತು ಸಮಾನ ವ್ಯವಹಾರದ ಬಗ್ಗೆ ಭಾರತ ಮತ್ತು ಬ್ರಿಟನ್ ನಡುವಿನ ದ್ವಿಪಕ್ಷೀಯ ಒಪ್ಪಂದನ್ನು ಭಾರತ ಸರಕಾರ ಉಲ್ಲಂಘಿಸಿದೆ
ಎಂದು ಡಿಸೆಂಬರ್ನಲ್ಲಿ 3 ಸದಸ್ಯರ ಅಂತರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ತೈಲ ಸಂಸ್ಥೆಗೆ 12,695 ಕೋಟಿ ರೂ. ಮೊತ್ತದ ಜತೆಗೆ ಇತರ ವೆಚ್ಚವನ್ನೂ ಮರುಪಾವತಿಸುವಂತೆ ಆದೇಶದಲ್ಲಿ ಸೂಚಿಸಲಾಗಿತ್ತು. ಈ ಆದೇಶ ಜಾರಿಗೊಳಿಸಲು ಕೇರ್ನ್ಸ್ ಸಂಸ್ಥೆ 9 ದೇಶಗಳ ನ್ಯಾಯಾಲಯ ಮೆಟ್ಟಿಲೇರಿತ್ತು. ಈ ಆದೇಶವನ್ನು ಅಮೆರಿಕ, ಬ್ರಿಟನ್, ನೆದರ್ಲ್ಯಾಂಡ್, ಕೆನಡಾ ಮತ್ತು ಫ್ರಾನ್ಸ್ ನ ನ್ಯಾಯಾಲಯ ಪರಿಗಣಿಸಿದೆ.





