ಕಾರ್ಕಳ ಪೊಲೀಸ್ ದೌರ್ಜನ್ಯದ ಆರೋಪ : ಕಾಂಗ್ರೆಸ್ ಕಾರ್ಯಕರ್ತನ ಸ್ಥಿತಿ ಗಂಭೀರ

ರಾಧಾಕೃಷ್ಣ
ಕಾರ್ಕಳ: ಸೈನಿಕರ ಬಗ್ಗೆ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೊಸ್ಟ್ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸ್ ಠಾಣೆಗೆ ಕರೆಸಿ ಆತನ ಮೇಲೆ ಠಾಣಾಧಿಕಾರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಪರಿಣಾಮ ಕಾಂಗ್ರೆಸ್ ಕಾರ್ಯಕರ್ತ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಕಾರ್ಕಳ ತಾಲೂಕಿನ ಹಿರ್ಗಾನ ನಿವಾಸಿ ರಾಧಾಕೃಷ್ಣ ಎಂಬವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ತನ್ನ ಫೇಸ್ ಬುಕ್ ನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್ ಗಳನ್ನು ಹಾಕಿದ್ದರು ಎಂದು ದೂರಲಾಗಿದೆ.
2020 ಆಗಸ್ಟ್ ನಲ್ಲಿ ಇವರ ಫೇಸ್ ಬುಕ್ ನ ಫೇಕ್ ಐಡಿಯ ಮುಖಾಂತರ ಕಿಡಿಗೇಡಿಗಳು ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದು, ಇದರ ಬಗ್ಗೆ ರಾಧಾಕೃಷ್ಣ ಅವರೇ ಬೆಂಗಳೂರು ಉತ್ತರ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ 26-8-2020 ರಂದು ದೂರು ನೀಡಿದ್ದರು ಮತ್ತು ಪೊಲೀಸರ ಮನವಿಯ ಮೇರೆಗೆ ಮತ್ತೊಮ್ಮೆ 4-9-2020 ದೂರು ನೀಡಿದ್ದರು.
ಈ ಬಗ್ಗೆ ಪೊಲೀಸ್ ತನಿಖೆ ನಡೆಸಿ ಇವರ ಹೇಳಿಕೆ ಪಡೆಯಲಾಗಿತ್ತು ನಂತರ ಇವರು ಕೆಲಸ ಕಳೆದುಕೊಂಡು ಊರಿಗೆ ಮರಳಿದ್ದು, ಈ ಮಧ್ಯೆ 4.4.2021ರಂದು ಹೃದಯಾಘಾತದಿಂದಾಗಿ ಸ್ಟಂಟ್ ಅಳವಡಿಸಲಾಗಿತ್ತು.
ಕೆಲ ದಿನಗಳ ಹಿಂದೆ ಕಾರ್ಕಳ ನಗರ ಠಾಣೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಸತತ ಮೂರು ದಿನಗಳಲ್ಲಿ ಪೊಲೀಸ್ ಠಾಣೆಗೆ ಹೋದಾಗ ಠಾಣಾಧಿಕಾರಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಗುರುವಾರ ಎಕಾಎಕಿ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿದ ಪರಿಣಾಮ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
''ಬಿಜೆಪಿ ಶಾಸಕರ ಕುಮ್ಮಕ್ಕಿನಿಂದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣರ ಮೇಲೆ ಕಾರ್ಕಳ ಪೊಲೀಸರು ಬಿಜೆಪಿ ಮುಖಂಡರ ಸಮ್ಮುಖ ಠಾಣೆಯಲ್ಲಿ ಗಂಭೀರ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಇದು ಖಂಡನೀಯ. ತಪ್ಪಿತಸ್ಥ ಪೊಲೀಸರ ಮೇಲೆ ಕಠಿಣ ಕ್ರಮ ಜರುಗಬೇಕು. ಬಿಜೆಪಿ ಪೊಲೀಸರನ್ನು ಬಳಸಿ ವಿರೋಧಿ ಧ್ವನಿಗಳನ್ನು ಹತ್ತಿಕ್ಕಲು ಹೊರಟಿದೆ. ಇದನ್ನು ಎಲ್ಲರೂ ಒಂದಾಗಿ ವಿರೋಧಿಸಬೇಕು''.
- ಮುನೀರ್ ಕಾಟಿಪಳ್ಳ, ಡಿವೈಎಫ್ ಐ ರಾಜ್ಯಾಧ್ಯಕ್ಷ
ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ.
— Siddaramaiah (@siddaramaiah) July 9, 2021
ಇವರ ಅನಾರೋಗ್ಯವನ್ನೂ ಲೆಕ್ಕಿಸದೆ,
ಹಳೆ ಸುಳ್ಳು ಕೇಸ್ ಆಧರಿಸಿ,
ಪೊಲೀಸರು ದೌರ್ಜನ್ಯ ನಡೆಸಿದ್ದಾರೆ.
ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು.@DgpKarnataka pic.twitter.com/8zjPtLu3Lm







