ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ ವಿರೋಧ: ಫಲ್ಗುಣಿ ನದಿಯಲ್ಲಿ ಸ್ಥಳೀಯ ಮೀನುಗಾರರಿಂದ ಪ್ರತಿಭಟನೆ

ಮಂಗಳೂರು, ಜು. 9: ಕೇಂದ್ರ ಸರಕಾರದ ಸಾಗರ ಮಾಲಾ ಯೋಜನೆಯಡಿ ಕೋಸ್ಟಲ್ ಬರ್ತ್ ನಿರ್ಮಾಣ ಸ್ಥಳೀಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರಿಕೆಗೆ ತೊಂದರೆಯಾಗಲಿದೆ ಎಂದು ಆಕ್ಷೇಪಿಸಿ ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ನೇತೃತ್ವದಲ್ಲಿ ಬೆಂಗರೆ ಯಲ್ಲಿ ಸ್ಥಳೀಯ ಮೀನುಗಾರರು ವಿನೂತನ ಪ್ರತಿಭಟನೆ ಮೂಲಕ ಗಮನ ಸೆಳೆದರು.
ಕೇಂದ್ರ ಸರಕಾರದ ಸಾಗರ ಮಾಲಾ ಯೋಜನೆಯಡಿ ದೇಶೀಯ ಹಡಗುಗಳ ನಿಲುಗಡೆಗಾಗಿ ಫಲ್ಗುಣಿ ನದಿ ದಂಡೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಕೋಸ್ಟಲ್ ಬರ್ತ್ ಸಾಂಪ್ರದಾಯಿಕ ಮೀನುಗಾರರ ಬದುಕಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯುತ್ತಿದೆ. ಮನೆಗಳಲ್ಲಿ ಹಾಗೂ ದೋಣಿಗಳಲ್ಲಿ ಭಿತ್ತಿಪತ್ರ ಹಿಡಿದು ಸಂಜೆಯವರೆಗೆ ಶಾಂತಿಯುತ ಪ್ರತಿಭಟನೆಯ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ವನ್ನು ಮೀನುಗಾರರು ಮಾಡುತ್ತಿದ್ದಾರೆ.
ಬೆಂಗರೆಯ ಫಲ್ಗುಣಿ ನದಿ ತೀರದಲ್ಲಿ ದೋಣಿಯಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಗೌರವ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಕೋಸ್ಟಲ್ ಬರ್ತ್ ಜಾರಿಗೊಂಡರೆ ಫಲ್ಗುಣಿ, ನೇತ್ರಾವತಿ ನದಿಗಳಲ್ಲಿ ಮೀನುಗಾರಿಕೆ ನಡೆಸುವ 600ರಷ್ಟು ನಾಡದೋಣಿ ಮೀನು ಗಾರರು, ಮಂಗಳೂರು ಮೀನುಗಾರಿಕಾ ಧಕ್ಕೆಯಲ್ಲಿ ಬೋಟ್‌ನಲ್ಲಿ ಮೀನುಗಾರರು ತೊಂದರೆ ಅನುಭವಿಸಲಿದ್ದಾರೆ ಎಂದರು.
ಕೇಂದ್ರ ಸರಕಾರದ ಸಾಗರ್ ಮಾಲಾ ಯೋಜನೆ ಬೆಂಗರೆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ರಾಜ್ಯದ ಮೂರು ಜಿಲ್ಲೆಗಳ ಕರಾವಳಿ ತೀರಕ್ಕೆ ಸಮಸ್ಯೆ ಆಗಲಿದೆ. ಹೊನ್ನಾವರದಲ್ಲಿ, ಕಾರವಾರದಲ್ಲಿ ಈಗಾಗಲೇ ಸಾಗರ್ ಮಾಲ ಯೋಜನೆ ಜಾರಿಗೊಳ್ಳುತ್ತಿದೆ. ಇದನ್ನು ವಿರೋಧಿಸಿ ಹೋರಾಟವೂ ನಡೆಯುತ್ತಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರ ಮೀನುಗಾರರ ಹೋರಾಟವನ್ನು ಹತ್ತಿಕ್ಕಲು ಪೊಲೀಸ್ ಬಲ ಪ್ರಯೋಗಿ ಸುತ್ತಿದೆ. ಹೊನ್ನಾವರದಲ್ಲಿ ಇತ್ತೀಚೆಗೆ ಲಾಠಿ ಚಾರ್ಜ್ ಮಾಡಿ ಪೊಲೀ ಹೋರಾಟಗಾರರ ಧ್ವನಿಯಡಗಿಸುವ ಪ್ರಯತ್ನ ಮಾಡಿದೆ. ಪ್ರಸಕ್ತ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರ ಮೀನುಗಾರರು ಸೇರಿದಂತೆ ದುಡಿಯುವ ಜನರ ಸಮಸ್ಯೆಗಳನ್ನು ಆಲಿಸದೆ, ಕಾರ್ಪೊರೇಟ್ ಶಕ್ತಿಗಳ ಪರವಾಗಿ ಕಾರ್ಯ ರ್ನಿಹಿಸುತ್ತಿದೆ ಎಂದು ಅವರು ಆರೋಪಿಸಿದರು.
ಬೆಂಗರೆಯಲ್ಲಿ ಕೋಸ್ಟಲ್ ಬರ್ತ್ ಕಾಮಗಾರಿ ಆರಂಭ ಆದಾಗ ಮನವಿ ಸಲ್ಲಿಸಿ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗಿದೆ. ಆದರೆ ಸಮಸ್ಯೆ, ಮನವಿಗಳಿಗೆ ಗಮನ ನೀದೆ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು, ಇದೀಗ ಶಾಂತಿಯುತ ಪ್ರತಿಭಟನೆಯ ಮೂಲಕ ಸರಕಾರದ ಗಮನ ಸೆಳೆಯಲಾಗುತ್ತಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡರಾದ ಸಂತೋಷ್ ಕುಮಾರ್ ಬಜಾಲ್, ಬಿ.ಕೆ. ಇಮ್ತಿಯಾಝ್, ಸಂಘದ ಅಧ್ಯಕ್ಷ ಅಬ್ದುಲ್ ತಯ್ಯೂಬ್ ಬೆಂಗರೆ, ಸಂತೋಷ್ ಹಾಗೂ ಇತರರು ಉಪಸ್ಥಿತರಿದ್ದರು.










