ಚಾಮರಾಜನಗರ: ಟ್ರ್ಯಾಕ್ಟರ್ಗೆ ಸಿಲುಕಿ ಬಾಲಕ ಮೃತ್ಯು; ನೊಂದ ಚಾಲಕ ಆತ್ಮಹತ್ಯೆ

ಚಾಮರಾಜನಗರ : ಟ್ರ್ಯಾಕ್ಟರ್ಗೆ ಸಿಲುಕಿ ಬಾಲಕನೋರ್ವ ಮೃತಪಟ್ಟಿದ್ದು ಇದರಿಂದ ನೊಂದ ಚಾಲಕನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಸವಕನಹಳ್ಳಿಪಾಳ್ಯ ಎಂಬಲ್ಲಿ ನಡೆದಿದೆ.
ಸವಕನಹಳ್ಳಿಪಾಳ್ಯ ಗ್ರಾಮದ ಹರ್ಷ (5) ಎಂಬ ಬಾಲಕ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪಿಹೆಚ್ಡಿ ಸಂಶೋಧನೆ ಕೈಗೊಂಡಿದ್ದ ಸುನೀಲ್ (23) ಮೃತರು ಎಂದು ಗುರುತಿಸಲಾಗಿದೆ.
ಕ್ರಿಕೆಟ್ ಟೂರ್ನಮೆಂಟ್‌ಗಾಗಿ ಜಮೀನೊಂದನ್ನು ಸಮತಟ್ಟು ಮಾಡುತ್ತಿದುದನ್ನು ನೋಡುತ್ತಾ ನಿಂತಿದ್ದ ಹರ್ಷ ಎಂಬ ಬಾಲಕನಿಗೆ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಗುದ್ದಿದೆ. ಈ ವೇಳೆ ಸುನೀಲ್ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ಎನ್ನಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟ ವಿಚಾರ ತಿಳಿದು, ಮನನೊಂದ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.





