ಕೆಆರ್ ಎಸ್ ಬಳಿ ಗಣಿಗಾರಿಕೆ ನಡೆಯುತ್ತಿದ್ದರೆ, ಕ್ರಮ ಕೈಗೊಳ್ಳಿ: ಎಂ.ಬಿ.ಪಾಟೀಲ್

ಬೆಂಗಳೂರು, ಜು.9: ಕೆಆರ್ ಎಸ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದರೆ, ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್ ಎಸ್ ಪುರಾತನ ಜಲಾಶಯವಾಗಿದೆ. ಹೀಗಾಗಿ, ಜಲಾಶಯದ ಸಮೀಪ ಗಣಿಗಾರಿಕೆ ನಡೆಯಲು ಬಿಡಬಾರದು ಎಂದು ನುಡಿದರು.
ಅಲ್ಲದೆ, ಜಲಾಶಯಗಳಿಂದ ಸುರಕ್ಷಿತ ಅಂತರದಲ್ಲಿ ಗಣಿಗಾರಿಕೆ ನಡೆಯಬೇಕು. ಡ್ಯಾಂ ಸುತ್ತಮುತ್ತ, ನಿಗದಿತ ವ್ಯಾಪ್ತಿಯ ಒಳಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಅದರಿಂದ ನಿಜವಾಗಲು ತೊಂದರೆ ಆಗುತ್ತದೆ. ಅದನ್ನ ಸರಕಾರ ತಡೆಗಟ್ಟುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ತಮ್ಮ ಕ್ಷೇತ್ರದ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿತ್ತು, ಅದರ ಚಾಲನೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದ ಅವರು, ಕೆಆರ್ ಎಸ್ ಅಕ್ರಮ ಗಣಿಗಾರಿಕೆ ವಿಚಾರವಾಗಿ ನನಗೆ ಗೊತ್ತಿಲ್ಲ. ಆದರೆ, ಕೆಆರ್ ಎಸ್ ಸೇರಿದಂತೆ ರಾಜ್ಯದ ಹಲವು ಡ್ಯಾಂಗಳ ಆಧುನೀಕರಣಕ್ಕೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಅನುಮತಿ ಸಿಕ್ಕಿತ್ತು. ಉಮಾ ಭಾರತಿ ಅವರು ಕೇಂದ್ರ ಜಲಸಂಪನ್ಮೂಲ ಸಚಿವೆಯಾಗಿದ್ದರು. ಆಗ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಡ್ಯಾಂಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿತ್ತು ಎಂದೂ ಹೇಳಿದರು.





