ಅವರೇ ನಮ್ಮ ಜಗದ್ಗುರುಗಳು: ಸಚಿವ ಯೋಗೇಶ್ವರ್ ಬಗ್ಗೆ ರೇಣುಕಾಚಾರ್ಯ ವ್ಯಂಗ್ಯ

ಬೆಂಗಳೂರು, ಜು. 9: `ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ.ಅನುದಾನ, ನನಗೆ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್‍ನಲ್ಲಿ ಮನೆ ಮತ್ತು ಕಾರು ಸಹಿತ ಹಲವು ಸೌಲಭ್ಯ ಸಿಕ್ಕಲು ಅವರೇ ಕಾರಣ. ಅವರೇ ನಮಗೆ ಜಗದ್ಗುರುಗಳು. ಅವರ ವಿರುದ್ಧ ಮಾತನಾಡಿದರೆ ಅವರ ಮೂರನೇ ಕಣ್ಣಿನ ಜ್ವಾಲೆಗೆ ಸಿಕ್ಕಿ ನಾನೇ ಭಸ್ಮ ಆಗಿಬಿಡ್ತೀನಿ' ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಚಿವ ಯೋಗೇಶ್ವರ್ ಹೆಸರೇಳದೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ಸಿಎಂ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಅವರು ನಮಗೆ ಒಂದು ರೀತಿಯಲ್ಲಿ ಜಗದ್ಗುರುಗಳಿದ್ದಂತೆ. ನನ್ನ ಕ್ಷೇತ್ರ ಅಭಿವೃದ್ಧಿಯಾಗಿರುವುದಕ್ಕೆ, ನಾನು ಶಾಸಕನಾಗಿರುವುದಕ್ಕೆ ಹಾಗೂ ಅಬಕಾರಿ ಸಚಿವನಾಗಿದ್ದಕ್ಕೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆಂದರೆ ಅದಕ್ಕೆ ಆ ಜಗದ್ಗುರುಗಳೇ ಕಾರಣ. ಪಕ್ಷ ಕಟ್ಟುವಲ್ಲಿಯೂ ಅವರ ಪಾತ್ರ ಹಿರಿದು' ಎಂದು ಲೇವಡಿ ಮಾಡಿದರು.
`ಅವರು ತುಂಬಾ ದೊಡ್ಡವರು. ಅವರ ಆಶೀರ್ವಾದದಿಂದ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್‍ನಲ್ಲಿದ್ದೇನೆ. ಅವರ ಮೇಲೆ ಟೀಕೆ ಮಾಡಿದರೆ ಅವರ ಮೂರನೆ ದೃಷ್ಟಿ ನನ್ನ ಮೇಲೆ ಬೀಳುತ್ತದೆ. ಅವರು ಮೂರನೆ ಕಣ್ಣು ಬಿಟ್ಟರೆ ನಾನು ಭಸ್ಮವಾಗಿ ಬಿಡುತ್ತೇನೆ. ಅವರನ್ನು ನಾನು ಪರಮಾತ್ಮನ ಸ್ಥಾನದಿಂದ ನೋಡುತ್ತಿದ್ದೇನೆ. ಆದರೆ, ಅವರನ್ನು ಚನ್ನಪಟ್ಟಣದಲ್ಲಿ ಜನ ಏಕೆ ತಿರಸ್ಕರಿಸಿದರು? ಎಂಬ ಬಗ್ಗೆ ಅವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ' ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
`ದಿಲ್ಲಿ' ದಿನಾಂಕ ನಿಗದಿ ಆಗಿಲ್ಲ: ದಿಲ್ಲಿಗೆ ತೆರಳುತ್ತೇವೆ. ಆದರೆ, ಇನ್ನೂ ದಿನಾಂಕ ನಿಗದಿ ಮಾಡಿಲ್ಲ. ನಿನ್ನೆ ಆಪ್ತ ಶಾಸಕರೆಲ್ಲ ಸಿಎಂ ಭೇಟಿ ಮಾಡಿದ್ದು, ನನ್ನ ನಿವಾಸದಲ್ಲೂ ಸಮಾಲೋಚನೆ ನಡೆಸಿದ್ದೇವೆ. ಬಿಎಸ್‍ವೈ ವಿರುದ್ಧ ಪದೇ ಪದೇ ಕೆಲವರು ಬಳಕೆ ಮಾಡುತ್ತಿರುವ ಭಾಷೆ ಸರಿಯಲ್ಲ. ಕೋವಿಡ್ ಸಂದರ್ಭದಲ್ಲಿ ಈ ರೀತಿ ಮಾಡುವುದು ಶೋಭೆಯಲ್ಲ. ಹೀಗಾಗಿ ವರಿಷ್ಟರನ್ನು ಭೇಟಿ ಮಾಡುತ್ತೇವೆ' ಎಂದರು.
`ನಾವು ಬೇರೆಯವರಂತೆ ಕದ್ದು ಮುಚ್ಚಿ ದಿಲ್ಲಿಗೆ ಹೋಗುವುದಿಲ್ಲ. ಅಲ್ಲದೆ, ವರಿಷ್ಟರ ಮನೆಗೆ ಗೇಟ್ ಮುಟ್ಟಿ ವಾಪಸ್ ಬರುವುದಿಲ್ಲ. ವರಿಷ್ಟರ ಭೇಟಿಗೆ ದಿನಾಂಕ ನಿಗದಿ ಮಾಡಿ ದಿಲ್ಲಿಗೆ ತೆರಳುತ್ತೇವೆ ಎಂದ ರೇಣುಕಾಚಾರ್ಯ, ಊಟ-ತಿಂಡಿಗೆ ಶಾಸಕರು ಸೇರಿದರೆ ಅದು ಪ್ರತ್ಯೇಕ ಸಭೆ ಅಲ್ಲ. ಶಾಸಕರ ಭವನದಲ್ಲಿ ಎಲ್ಲರೂ ಸೇರಿ ಚರ್ಚೆ ನಡೆಸಿದ್ದೇವೆಯೇ ಹೊರತು ನಾವು ಯಾವುದೇ ರೆಸಾರ್ಟ್ ಅಥವಾ ಹೊಟೇಲ್‍ಗೆ ಹೋಗಿಲ್ಲ' ಎಂದು ಸ್ಪಷ್ಟಣೆ ನೀಡಿದರು.







