ಬಾರಾಬಂಕಿ ಮಸೀದಿ ʼಅಕ್ರಮʼ ನೆಲಸಮ ಪ್ರಕರಣ: ಮಸೀದಿ ಕಾರ್ಯದರ್ಶಿ ವಿರುದ್ಧದ ಎಫ್‍ಐಆರ್ ರದ್ದುಗೊಳಿಸಲು ಕೋರ್ಟ್ ನಕಾರ

ಹೊಸದಿಲ್ಲಿ : ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ಗರೀಬ್ ನವಾಝ್ ಮಸೀದಿಯನ್ನು `ಅಕ್ರಮ'ವಾಗಿ ಕೆಡವಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ತಾಣ ದಿ ವೈರ್ ನ ವೀಡಿಯೋ ವರದಿಗಾಗಿ ಆ ಸುದ್ದಿ ಸಂಸ್ಥೆಯ ಜತೆ ಮಾತನಾಡಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಗೊಳಿಸಬೇಕೆಂದು ಮಸೀದಿಯ ಕಾರ್ಯದರ್ಶಿ ಮತ್ತು ಇನ್ನೊಬ್ಬ ವ್ಯಕ್ತಿ ಸಲ್ಲಿಸಿರುವ ಅಪೀಲನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಆದರೆ ಅಪೀಲುದಾರರಾದ ಮಸೀದಿ ಕಾರ್ಯದರ್ಶಿ ಮುಹಮ್ಮದ್ ಅನೀಸ್ ಹಾಗೂ ಬಾರಾಬಂಕಿ ನಿವಾಸಿ ಮೊಹಮ್ಮದ್ ನಯೀಂ ಅವರು ನಿರೀಕ್ಷಣಾ ಜಾಮೀನು ಸಲ್ಲಿಸಬಹುದು ಆದರೆ ಈ ಹಂತದಲ್ಲಿ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪೊಲೀಸ್ ಅಧಿಕಾರಿಯೊಬ್ಬರು ದಾಖಲಿಸಿದ ದೂರಿನ ಆಧಾರದಲ್ಲಿ ಜೂನ್ 24ರಂದು ಎಫ್‍ಐಆರ್ ದಾಖಲಾಗಿತ್ತು. ಎಫ್‍ಐಆರ್‍ನಲ್ಲಿ ದಿ ವೈರ್ ಮತ್ತದರ ಇಬ್ಬರು ಪತ್ರಕರ್ತರ ಹೆಸರುಗಳೂ ಉಲ್ಲೇಖಗೊಂಡಿವೆ.
ಬಾರಾಬಂಕಿಯ ರಾಮ್ ಸ್ನೇಹಿ ಘಾಟ್ ಪ್ರದೇಶದಲ್ಲಿರುವ ಮಸೀದಿಯನ್ನು ಅಕ್ರಮವಾಗಿ ನೆಲಸಮಗೊಳಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಿ ವೈರ್ ವರದಿ ಮಾಡಿತ್ತು.
ಶುಕ್ರವಾರದ ವಿಚಾರಣೆ ವೇಳೆ ಅಪೀಲುದಾರರ ಪರ ವಕೀಲರು ತಮ್ಮ ವಾದ ಮಂಡಿಸುತ್ತಾ ಆರೋಪ ನಿರಾಧಾರವಾಗಿದೆ ಹಾಗೂ ಪೊಲೀಸರು ಅಪೀಲುದಾರರನ್ನು ಯಾವ ಸಮಯದಲ್ಲಾದರೂ ಬಂಧಿಸಬಹುದಾಗಿದೆ ಹಾಗೂ ಈ ಎಫ್‍ಐಆರ್ ಸಂವಿಧಾನದತ್ತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದರು.







