ಪಂಕಜಾ ಮುಂಢೆ ರಾಜಕೀಯ ಜೀವನ ಮುಗಿಸಲು ಬಿಜೆಪಿ ಯೋಜನೆ: ಶಿವಸೇನೆ ಆರೋಪ

ಮುಂಬೈ: ದಿವಂಗತ ನಾಯಕ ಗೋಪಿನಾಥ್ ಮುಂಢೆಯವರ ಪುತ್ರಿ ಹಾಗೂ ಎರಡು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವ ಪ್ರೀತಮ್ ಮುಂಢೆ ಬದಲಿಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ಭಗವತ್ ಕರಾಡ್ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಮೂಲಕ ಪ್ರೀತಮ್ ಸಹೋದರಿ, ಮಹಾರಾಷ್ಟ್ರದ ಮಾಜಿ ಸಚಿವೆ ಪಂಕಜಾ ಮುಂಢೆ ಅವರ ರಾಜಕೀಯ ಜೀವನ ಅಂತ್ಯಗೊಳಿಸಲು ಬಿಜೆಪಿ ಯೋಜಿಸಿದೆ ಎಂದು ಶಿವಸೇನೆ ಶುಕ್ರವಾರ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕೇಂದ್ರ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ಮಾಡಿದ್ದು, ಇದರ ಭಾಗವಾಗಿ ಕರಾಡ್ ಅವರು ಹೊಸ ಹಣಕಾಸು ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ವೃತ್ತಿಯಲ್ಲಿ ವೈದ್ಯರಾಗಿರುವ ಕರಾಡ್(64) ರಾಜ್ಯಸಭೆಯಿಂದ ಮೊದಲ ಬಾರಿ ಸಂಸದರಾಗಿದ್ದರು.
ಹೊಸ ಮಂತ್ರಿ ಮಂಡಲದಲ್ಲಿ ಪ್ರೀತಮ್ ಮುಂಢೆ ಅವರನ್ನು ಸೇರಿಸಲಾಗುವುದು ಎಂಬ ಊಹಾಪೋಹವಿತ್ತು, ಆದರೆ ಸಂಪುಟದಲ್ಲಿ ಅವರಿಗೆ ಯಾವುದೇ ಸ್ಥಾನ ಸಿಗಲಿಲ್ಲ.
"ಭಗವತ್ ಕರಾಡ್ ಅವರನ್ನು ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ. ಇದು ಪಂಕಜಾ ಮುಂಢೆ ಅವರ ರಾಜಕೀಯ ವೃತ್ತಿಜೀವನವನ್ನು ಮುಗಿಸುವ ಗುರಿಯಾಗಿದೆ. ಬಿಜೆಪಿ ಮುಖಂಡ ದಿವಂಗತ ಗೋಪಿನಾಥ್ ಮುಂಢೆ ಅವರ ನೆರಳಲ್ಲಿ ಕರಾಡ್ ಬೆಳೆದಿದ್ದಾರೆ. ಪಂಕಜಾ ಅವರ ಸಹೋದರಿ ಪ್ರೀತಮ್ ಮುಂಢೆ ಬದಲಿಗೆ ಕರಾಡ್ ಸಚಿವರಾಗಿದ್ದಾರೆ. ಈ ಕ್ರಮವು ವಂಜಾರ ಸಮುದಾಯದಲ್ಲಿ ಒಡಕನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆಯೇ ಎಂಬ ಅನುಮಾನಕ್ಕೆ ಅವಕಾಶವಿದೆ'' ಎಂದು ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ' ದಲ್ಲಿ ಬರೆಯಲಾಗಿದೆ.
ಭಾರತಿ ಪವಾರ್ ಹಾಗೂ ಕಪಿಲ್ ಪಾಟೀಲ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ಬಿಜೆಪಿಯ ನಿಷ್ಠಾವಂತ ನಾಯಕರಿಗೆ ನೋವು ತಂದಿದೆ ಅದು ಹೇಳಿದೆ.
"ಭಾರತಿ ಪವಾರ್ ಮತ್ತು ಕಪಿಲ್ ಪಾಟೀಲ್ ಇಬ್ಬರೂ ಇತ್ತೀಚೆಗೆ ಎನ್‌ಸಿಪಿ ತೊರೆದು ಬಿಜೆಪಿಗೆ ಸೇರಿದ್ದರು. ಇದು ನಿಜವಾದ ಆಘಾತಕಾರಿ ವಿಚಾರ. ಮಹಾರಾಷ್ಟ್ರ ನಾಯಕ ನಾರಾಯಣ್ ರಾಣೆ ಕೂಡ ಹೊಸ ಸಂಪುಟದಲ್ಲಿ ಸ್ಥಾನ ಪಡೆದಿರುವುದು ಒಳ್ಳೆಯದು. ಈ ಹಿಂದೆ ಅವರು ಶಿವಸೇನೆ ಹಾಗೂ ಕಾಂಗ್ರೆಸ್ ಜೊತೆಗಿದ್ದ ಕಾರಣ ಅವರು ಮೂಲತಃ ಬಿಜೆಪಿಗೆ ಸೇರಿದವರಲ್ಲ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಹೇಳಿದೆ.







