ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ದ.ಕ.ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ

ಮಂಗಳೂರು, ಜು. 9: ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ಹಿರ್ಗಾನ್‌ರ ಮೇಲೆ ಕಾರ್ಕಳ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮತ್ತು ನ್ಯಾಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ಶುಕ್ರವಾರ ದ.ಕ.ಜಿಲ್ಲಾ ಎಸ್ಪಿ ಕಚೇರಿಯ ಮುಂದೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎಸ್ಪಿ ಕಚೇರಿಯ ಮುಂದೆ ಕಾರ್ಯಕರ್ತರು ಕೆಲಕಾಲ ಧರಣಿ ನಡೆಸಿದ್ದು, ಇದೇ ಸಂದರ್ಭ ಈ ರಸ್ತೆಯಾಗಿ ತೆರಳುತ್ತಿದ್ದ ಪೊಲೀಸ್ ಆಯುಕ್ತ ಶಶಿಕುಮಾರ್ ಕಾಂಗ್ರೆಸ್ ಕಾರ್ಯಕರ್ತರನ್ನು ಕಂಡು ವಿಷಯ ತಿಳಿದುಕೊಂಡರು. ಹಾಗೇ ‘ಧರಣಿ ಕೈ ಬಿಟ್ಟು ಪಶ್ಚಿಮ ವಲಯ ಐಜಿಪಿಗೆ ಮನವಿ ಸಲ್ಲಿಸುವಂತೆ ಸೂಚಿಸಿದರು. ಅದರಂತೆ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಕೈ ಬಿಟ್ಟಿದ್ದು, ಐಜಿಪಿಯ ಪರವಾಗಿ ಪಾಂಡೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಮನವಿ ಸ್ವೀಕರಿಸಿದರು.
ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಐವನ್ ಡಿಸೋಜ, ರಾಜ್ಯ ಯುವ ಕಾಂಗ್ರೆಸ್ ಮುಖಂಡ ಸುಹೈಲ್‌ಕಂದಕ್, ಕಾರ್ಪೊರೇಟರ್ ಅಬ್ದುಲ್ ಲತೀಫ್, ರಮಾನಂದ ಪೂಜಾರಿ, ಅಶ್ವಿತ್ ಪಿರೇರಾ, ಸರ್ಫ್ರಾಝ್ ನವಾಝ್, ಯೂಸುಫ್ ಉಚ್ಚಿಲ್, ಸಿ.ಎಂ.ಮುಸ್ತಫಾ, ಆರೀಫ್ ಬಂದರ್, ನಝೀರ್ ಬಜಾಲ್, ಹಸನ್ ಫಳ್ನೀರ್ ಮತ್ತಿತರರು ಪಾಲ್ಗೊಂಡಿದ್ದರು.












